ಮೊಳಕಾಲ್ಮುರು (ಚಿತ್ರದುರ್ಗ): ಇಲ್ಲಿನ ಪೊಲೀಸರು ಭಾನುವಾರ 9 ಮಂದಿ ಅಂತರರಾಜ್ಯ ನಿಧಿಗಳ್ಳರನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಭೈರಾಪುರ, ಹಿರೇಕೆರೆಹಳ್ಳಿ ರಸ್ತೆಯಲ್ಲಿರುವ ವಿಭೂತಿ ಗುಡ್ಡದಲ್ಲಿ ಕೆಲವರು ಅನುಮಾನಾಸ್ಪದವಾಗಿ ಶೋಧ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಕೃತ್ಯ ಬಯಲಾಗಿದೆ.
ತಾಲ್ಲೂಕಿನ ಭೈರಾಪುರದ ತಿಮ್ಮರಾಜು, ತೆಂಗಿನ ಗೌರಸಮುದ್ರದ ರಾಮಾಂಜಿನಿ, ಗುಂಡ್ಲೂರಿನ ಟಿ. ಸಣ್ಣಪ್ಪ, ಬೊಮ್ಮಲಿಂಗೇನಹಳ್ಳಿಯ ಮೈಲಾರಪ್ಪ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಳಿಕೊತ್ತೂರ್ ಗ್ರಾಮದ ಎಂ.ಆರ್. ಮಂಜುನಾಥ್, ಎನ್. ಕೊತ್ತೂರ್ ಗ್ರಾಮದ ಎಂ. ಆನಂದ್, ಕಲಾಂನಗರದ ರವಿನಿಶ್ರೀ, ತೆಲಂಗಾಣದ ಚಿನ್ನಬೋಯಿನಪಲ್ಲಿಯ ಸಲ್ಕಾಪುರಂ ಶ್ರೀನಿವಾಸುಲು ಹಾಗೂ ವೆಂಕಟೇಶ್ ಬಂಧಿತರು. ಮತ್ತೊಬ್ಬ ಆರೋಪಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೇಣು ನಾಪತ್ತೆಯಾಗಿದ್ದಾನೆ.
ಇವರು ತಾಲ್ಲೂಕಿನ ಐತಿಹಾಸಿಕ ನುಂಕಿಮಲೆ ಸಿದ್ದೇಶ್ವರ ಬೆಟ್ಟ, ಅಶೋಕನ ಶಿಲಾ ಶಾಸನ, ಜಟ್ಟಂಗಿ ರಾಮೇಶ್ವರ ಬೆಟ್ಟ ಸೇರಿದಂತೆ ವಿವಿಧ ಸ್ಥಳಗಳು ಮತ್ತು ದೇವಸ್ಥಾನಗಳಲ್ಲಿ ಸ್ಥಳೀಯರ ನೆರವು ಪಡೆದು ನಿಧಿ ಆಸೆಗೆ ಭೂಮಿ ಅಗೆಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರಿಂದ ಇನ್ನೋವಾ ಕಾರು, ಜನರೇಟರ್ ಮತ್ತು ನೆಲ ಅಗೆಯುವ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಡಿವೈಎಸ್‌ಪಿ ಕೆ. ರಾಜಣ್ಣ, ಸಿಪಿಐ ವಸಂತ್ ಆಸೋದೆ, ಪಿಎಸ್‌ಐಗಳಾದ ಜಿ. ಪಾಂಡುರಂಗಪ್ಪ, ಈರೇಶ್ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.