ಮೊಳಕಾಲ್ಮುರು: ಪ್ರತಿ ಬುಧವಾರ ಇಲ್ಲಿ ನಡೆಯುವ ವಾರದ ಸಂತೆ ಮೈದಾನ ಅವ್ಯವಸ್ಥೆಯ ಆಗರವಾಗಿದ್ದು ಗ್ರಾಹಕರು ಮತ್ತು ವ್ಯಾಪಾರಿಗಳು ಹೈರಾಣಾಗುತ್ತಿದ್ದಾರೆ. ಮಳೆ ಬಂದರೆ ಕೆಸರುಗದ್ದೆಯಲ್ಲಿ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದ್ದು ಸಮಸ್ಯೆಗೆ ಪರಿಹಾರ ಕಾಣದಾಗಿದೆ.
ಗುಡ್ಡದ ತಟದಲ್ಲಿರುವ ಸಂತೆ ಪ್ರದೇಶ ಕಪ್ಪುಮಣ್ಣಿನಿಂದ ಕೂಡಿದೆ. ಮೇಲ್ಭಾಗದಿಂದ ಜೌಗು ಹರಿದು ಬರುವ ಕಾರಣ ಮೈದಾನ ನೀರಿನಿಂದ ಆವೃತವಾಗುತ್ತದೆ. ಸ್ವಲ್ಪ ಮಳೆ ಬಂದರೂ ಸಂತೆ ವಾತಾವರಣದಲ್ಲಿ ನೀರು ಶೇಖರಣೆಯಾಗಿ ವರ್ತಕರು, ಗ್ರಾಹಕರು ಸಮಸ್ಯೆ ಅನುಭವಿಸುತ್ತಾರೆ. ವಾಹನಗಳಲ್ಲಿ ಬರುವ ಜನರು ಅಲ್ಲಿ ಚಾಲನೆ ಮಾಡಲು ಸಾಧ್ಯವಾಗದೇ ಪರದಾಡುವುದು ಸಾಮಾನ್ಯವಾಗಿದೆ.
ಹಲವು ವರ್ಷಗಳ ಹಿಂದೆ ಹಾನಗಲ್- ರಾಯದುರ್ಗ ಮುಖ್ಯರಸ್ತೆ ಬದಿಯಲ್ಲಿ ವಾರದ ಸಂತೆ ನಡೆಯುತ್ತಿತ್ತು. ರಸ್ತೆಬದಿ ಸಂತೆ ನಡೆದರೆ ಅಪಾಯ ಸಂಭವಿಸಬಹುದು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. 2 ವರ್ಷದ ಹಿಂದೆ ಕೃಷಿ ಇಲಾಖೆ ಸಮೀಪಕ್ಕೆ ವಾರದ ಸಂತೆ ಸ್ಥಳಾಂತರ ಮಾಡಲಾಯಿತು. ಸ್ಥಳಾಂತರಗೊಂಡ ನಂತರ ಮೂಲ ಸೌಲಭ್ಯ ಒದಗಿಸದ ಕಾರಣ ಇಡೀ ಪ್ರದೇಶ ಅವ್ಯವಸ್ಥೆಯಲ್ಲಿ ಮುಳುಗಿದೆ.
ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಸಂತೆ ಪ್ರದೇಶವೇ ಜಲಾವೃತಗೊಳ್ಳುತ್ತದೆ. ಕೊಳಚೆ ಪ್ರದೇಶದಂತಾಗಿ ಕಾಲಿಡುವುದಕ್ಕೂ ಜನರು ಭಯಪಡುತ್ತಾರೆ. ‘ಕೂರಲು ಕಟ್ಟೆ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಸಾಮೂಹಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಮಾಡದ ಕಾರಣ ಸಂತೆಗೆ ಹೋಗಲು ಬೇಸರವಾಗುತ್ತದೆ’ ಎಂದು ವ್ಯಾಪಾರಿ ಮಾರಣ್ಣ ದೂರಿದರು.
‘ಸಂತೆ ಸ್ಥಳಾಂತರ ಮೊದಲು ಮುಖ್ಯರಸ್ತೆಯಲ್ಲಿ ಪ್ರಾಣಭಯದಲ್ಲಿ ವ್ಯಾಪಾರ ಮಾಡುತ್ತಿದ್ದೆವು. ಸ್ಥಳಾಂತರವಾಗಿ ಸಮಸ್ಯೆ ಮುಕ್ತಿಯಾಯಿತು ಎಂದು ಕೊಂಡೆವು. ಅಲ್ಲಿಗಿಂತಲೂ ಇಲ್ಲಿ ಹೆಚ್ಚು ಸಮಸ್ಯೆ ಕಾಡುತ್ತಿದೆ. ಪಟ್ಟಣದ ಹೊರಭಾಗದಲ್ಲಿ ಸಂತೆ ಇದ್ದು ವ್ಯಾಪಾರವೂ ಅಷ್ಟಕಷ್ಟೇ’ ವ್ಯಾಪಾರಿ ಪಾರ್ವತಮ್ಮ ದೂರಿದರು.
‘ಮೈದಾನ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿಯಲ್ಲಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹ 1 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದ್ದರು. ಇದಾಗಿ ವರ್ಷ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ಮಳೆಗಾಲ ಆರಂಭವಾಗಿದ್ದು ಆವರಣದಲ್ಲಿ ನೀರು ನಿಂತಲ್ಲಿ ಕಾಮಗಾರಿ ಮಾಡಲು ಬರುವುದಿಲ್ಲ’ ಎಂದು ರೈತಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರಿದರು.
‘ಕಾಮಗಾರಿ ಟೆಂಡರ್ ಆಗಿದೆ ಎಂದು ಸಬೂಬು ಹೇಳುವುದನ್ನು ಬಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಆರಂಭಿಸಬೇಕು. ಕೂಡಲೇ ಅನುದಾನ ಸ್ಥಿತಿಗತಿ ಮಾಹಿತಿ ನೀಡಬೇಕು. ಸೌಲಭ್ಯ ಇಲ್ಲದಿದ್ದರೂ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸುವುದನ್ನು ನಿಲ್ಲಿಸಬೇಕು. ಕಾಮಗಾರಿ ವಿಳಂಬ ಮಾಡಿದಲ್ಲಿ ಪ್ರತಿಭಟನೆ ನಡೆಸಲಾಗುವುದು‘ ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಸಿದರು.
‘ವ್ಯಾಪಾರಿಗಳು ವಾರದ ಸಂತೆಯಲ್ಲಿನ ಸಮಸ್ಯೆಗಳಿಗೆ ಬೇಸತ್ತು ಹೋಗಿದ್ದಾರೆ. ಪ್ರಾಂಗಣ ವ್ಯವಸ್ಥೆ ಇಲ್ಲದೇ ಸಂಪರ್ಕ ರಸ್ತೆ ಮುಂಭಾಗದಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಸಂಚಾರಕ್ಕೂ ತೊಂದರೆಯಾಗಿದೆ’ ಎಂದು ರೈತ ಮುಖಂಡ ಮರ್ಲಹಳ್ಳಿ ರವಿಕುಮಾರ್ ಹೇಳಿದರು.
‘ಪಟ್ಟಣ ಪಂಚಾಯಿತಿಯಲ್ಲಿ ಅಲಂಕಾರಿಕ ದೀಪ ಅಳವಡಿಕೆಗೆ ಇಟ್ಟಿದ್ದ ₹ 1 ಕೋಟಿ ಮೀಸಲು ಅನುದಾನವನ್ನು ಒಂದೂವರೆ ವರ್ಷದ ಹಿಂದೆ ಸಂತೆಮೈದಾನ ಅಭಿವೃದ್ಧಿಗೆ ಬಳಸಲಾಯಿತು. ಪಟ್ಟಣ ಪಂಚಾಯಿತಿ ನಿರ್ವಹಣೆ ಮಾಡಬೇಕಿದ್ದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಬದಲಾವಣೆ ಮಾಡಲಾಯಿತು. ನಮ್ಮ ವ್ಯಾಪ್ತಿಯಲ್ಲಿ ಇದ್ದಿದ್ದರೆ ಕಾಮಗಾರಿ ಪೂರ್ಣ ಮಾಡುತ್ತಿದ್ದೆವು‘ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.
Highlights - ನೀರು ಹರಿದು ಹೋಗಲು ಇಲ್ಲದ ಚರಂಡಿ ವ್ಯವಸ್ಥೆ ಕಪ್ಪುಮಣ್ಣಿನಿಂದ ಕೂಡಿರುವ ಜಾಗ ಕೆಸರುಮಯ ಸ್ವಲ್ಪ ಮಳೆಬಂದರೂ ಸಂತೆ ಮೈದಾನ ಜಲಾವೃತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.