ಮೊಳಕಾಲ್ಮುರು: ‘ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಡುಗಾಡ ಸಿದ್ಧರಿಗೆ ವಸತಿ ಯೋಜನೆಯಡಿ ನಿವೇಶನ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಫಲಾನುಭವಿಗಳು ಮುಂದಿನ ದಿನಗಳಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ರಾಯಾಪುರ ಮ್ಯಾಸರಹಟ್ಟಿಯಲ್ಲಿ ಶನಿವಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯ ಗ್ರಾಮಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಡುಗಾಡ ಸಿದ್ಧರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು.
‘ಇಲ್ಲಿನ ನಿವಾಸಿಗಳ ಪೈಕಿ ಕೆಲವರು ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯ ನಿವಾಸಿ ದೃಢೀಕರಣ ಹೊಂದಿದ್ದಾರೆ. ಅವುಗಳನ್ನು ರದ್ದುಪಡಿಸಿ ಇಲ್ಲಿಯ ನಿವಾಸಿ ದೃಢೀಕರಣ ಪಡೆಯಬೇಕು. ಇದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಮೂಲ ವೃತ್ತಿಗೆ ಜೋತು ಬೀಳದೆ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಬದುಕು ರೂಪಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
‘ರಾಯಾಪುರ ಮಾಸರಹಟ್ಟಿಯನ್ನು ಈಗ ಕಂದಾಯ ಇಲಾಖೆಯು ಕಂದಾಯ ಗ್ರಾಮವಾಗಿ ಘೋಷಣೆ ಮಾಡಿದೆ. ಜತೆಗೆ ಪದಿನಾನ್ ದೇವರಹಟ್ಟಿ ಎಂದು ಮರು ನಾಮಕರಣ ಮಾಡಲಾಗಿದೆ. ಹಲವು ವರ್ಷಗಳ ಬೇಡಿಕೆಗೆ ಈಗ ಫಲ ಸಿಕ್ಕಿದೆ. ತಾಲ್ಲೂಕಿನ 15 ಗ್ರಾಮಗಳನ್ನು ಹೊಸದಾಗಿ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ’ ಎಂದು ತಹಶೀಲ್ದಾರ್ ಟಿ. ಜಗದೀಶ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಬಸಪ್ಪ, ಪಿಡಿಒ ನೂರುಲ್ಲಾ, ಮುಖಂಡರಾದ ಜಿ.ಪಿ. ಸುರೇಶ್, ಮೊಗಲಹಳ್ಳಿ ಎಸ್, ಜಯಣ್ಣ, ವಿ. ಮಾರನಾಯಕ, ಬಿಇಒ ನಿರ್ಮಲಾದೇವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.