ಮೊಳಕಾಲ್ಮುರು: ಪಟ್ಟಣದ ವಿವಿಧೆಡೆ ಇತ್ತೀಚಿಗೆ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟ ಹೆಚ್ಚಿದ್ದು, ನಾಗರಿಕರು ಭಯ ಭೀತರಾಗಿದ್ದಾರೆ.
ಕೋನಸಾಗರ ರಸ್ತೆಯಲ್ಲಿರುವ ಎನ್‌ಐ ಬಡಾವಣೆಯಲ್ಲಿ ರಾತ್ರಿ ವೇಳೆ ಹಲವು ದಿನಗಳಿಂದ ತಡರಾತ್ರಿ ಮುಸುಕುಧಾರಿ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದು, ಮನೆಗಳ ಮುಂದೆ ನಿಂತು ವೀಕ್ಷಿಸುವುದು ಕಂಡುಬಂದಿದೆ. ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯಗಳು ದಾಖಲಾಗಿದೆ ಎಂದು ನಿವಾಸಿಗಳು ಹೇಳಿದರು.
ಕಳ್ಳತನ ಘಟನೆಗಳು ನಡೆದಿಲ್ಲ, ಆದರೆ ಯಾವ ಕಾರಣಕ್ಕಾಗಿ ಇವರು ಬಂದು ಹೋಗುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈಚೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಾ ಮನೆ ಮುಂದಿನ ಬೀದಿದೀಪದ ಸ್ವಿಚ್ ಆಫ್ ಮಾಡಿರುವುದು ದೃಶ್ಯಗಳಲ್ಲಿ ಇದೆ. ಈ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ರಾತ್ರಿ ಪೊಲೀಸ್ ಗಸ್ತು ವಾಹನ ಸೈರನ್ ಹಾಕಿಕೊಂಡು ಓಡಾಡುತ್ತದೆ. ಇದರಿಂದ ಕಳ್ಳರಿಗೆ ಸುಲಭವಾಗಿ ಪೊಲೀಸರು ಬರುವುದು ಗೊತ್ತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿದೆ. ನೈಪುಣ್ಯತೆ ಬಳಸಿ ಕಳ್ಳರನ್ನು ಹಿಡಿಯಲು ಮುಂದಾಗಬೇಕು. ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಲು ಭಯವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಪರಿಚಿತ ವ್ಯಕ್ತಿಗಳು ಓಡಾಟ ನಡೆಸುತ್ತಿರುವ ಬಗ್ಗೆ ದೂರು ಬಂದಿದೆ. ಹೆಚ್ಚಿನ ಸಿಬ್ಬಂದಿಯನ್ನು ರಾತ್ರಿ ವೇಳೆ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಪಕ್ಕದ ಆಂಧ್ರ ಪ್ರದೇಶದಿಂದ ದುಷ್ಕರ್ಮಿಗಳು ಬಂದಿರುವ ಶಂಕೆಯಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ಮಹೇಶ್ ಹೊಸಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.