ಮೊಳಕಾಲ್ಮುರು: ಅಗ್ನಿ ಅನಾಹುತ ಸಂಭವಿಸಿದಲ್ಲಿ ಅಗತ್ಯವಿರುವ ಅಗ್ನಿಶಾಮಕ ತುರ್ತು ವಾಹನ ವ್ಯವಸ್ಥೆ ಇಲ್ಲದ ಪರಿಣಾಮ ತಾಲ್ಲೂಕಿನಲ್ಲಿ ಸಂಭವನೀಯ ಅಗ್ನಿ ಪ್ರಮಾದಗಳನ್ನು ತಡೆಯುವ ಕುರಿತು ಆತಂಕ ನಿರ್ಮಾಣವಾಗಿದೆ.
ಹಲವು ವರ್ಷಗಳ ಬೇಡಿಕೆ ನಂತರ 10 ವರ್ಷಗಳ ಹಿಂದೆ ಅಗ್ನಿಶಾಮಕ ಕಚೇರಿಯನ್ನು ಇಲ್ಲಿ ಆರಂಭಿಸಲಾಯಿತು. ತಾಲ್ಲೂಕಿನಲ್ಲಿ 130 ಜನವಸತಿ ಪ್ರದೇಶಗಳಿದ್ದು, ಬಯಲುಸೀಮೆ ಪ್ರದೇಶವಾಗಿರುವ ಕಾರಣ ಅಗ್ನಿ ಅನಾಹುತ ಹೆಚ್ಚು. ಅದರಲ್ಲೂ ಬೇಸಿಗೆಯಲ್ಲಿ ಇದು ದ್ವಿಗುಣವಾಗಿ ವರದಿಯಾಗುತ್ತವೆ.
ಸರ್ಕಾರ 15 ವರ್ಷ ಸೇವೆ ಸಲ್ಲಿಸಿದ ವಾಹನಗಳನ್ನು ರಸ್ತೆಗಿಳಿಸಬಾರದು ಎಂಬ ಸೂಚನೆ ನೀಡಿರುವ ಕಾರಣ ಇಲ್ಲಿದ್ದ 2 ಅಗ್ನಿಶಾಮಕ ವಾಹನಗಳು ಸೇವೆಯಿಂದ ದೂರವಾಗಿವೆ. ಒಂದು ವಾಹನ 2023ರ ಜೂನ್‌ನಲ್ಲಿ ಇನ್ನೊಂದು 2025ರ ಜನವರಿಯಲ್ಲಿ ಅವಧಿ ಪೂರ್ಣವಾಗಿದ್ದು, ಅಂದಿನಿಂದಲೂ ಸಮಸ್ಯೆ ಕಾಡುತ್ತಿದೆ. ತುರ್ತು ಸೇವೆಗಾಗಿ 500 ಲೀಟರ್ ಸಾಮರ್ಥ್ಯದ ಮಿನಿ ತುರ್ತು ಸೇವಾ ವಾಹನ ನೀಡಿದ್ದು, ಇದರ ಅವಧಿಯೂ ಜೂನ್‌ಗೆ ಪೂರ್ಣವಾಗುತ್ತಿರುವ ಕಾರಣ ಆತಂಕ ಇನ್ನೂ ಹೆಚ್ಚಳವಾಗಿದೆ.
‘ಮಿನಿ ಸೇವಾ ವಾಹನದಲ್ಲಿ 500 ಲೀಟರ್ ಮಾತ್ರ ನೀರಿನ ಸಾಮರ್ಥ್ಯವಿದ್ದು ಇದರಲ್ಲಿ ಬೆಂಕಿ ನಂದಿಸುವುದು ಅಸಾಧ್ಯ. ಭಾನುವಾರ ಪಟ್ಟಣದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಹುಲ್ಲಿನ ಬಣವೆ ರಕ್ಷಿಸಲು ಸಾಧ್ಯವಾಗಲಿಲ್ಲ. ಪದೇ ಪದೇ ನೀರು ತುಂಬಿಸಿಕೊಂಡು ಬರಲು ವಾಹನ ಹೋಗುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿ ಎಚ್.ಆರ್. ವೆಂಕಟೇಶ್ ದೂರಿದರು.
ಈ ಠಾಣೆಗೆ 22 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 7 ಜನ ಅಗ್ನಿ ಸಹಾಯಕರು, 4 ಜನ ಪ್ರಮುಖ ಅಗ್ನಿ ಸಹಾಯಕರು, 3 ಜನ ಅಗ್ನಿಶಾಮಕ ಅಧಿಕಾರಿಗಳು, 4 ಜನ ಚಾಲಕರು, ಒಬ್ಬರು ಚಾಲಕ ತಂತ್ರಜ್ಞರು ಸೇರಿ 17 ಸಿಬ್ಬಂದಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವೇತನಕ್ಕೆ ವ್ಯಯಿಸಲಾಗುತ್ತಿದೆ. ಪ್ರಮುಖವಾಗಿ ಬೇಕಿರುವ ಬೆಂಕಿ ನಂದಿಸುವ ವಾಹನವೇ ಇಲ್ಲವಾದ ಮೇಲೆ ಉಳಿದ ವ್ಯವಸ್ಥೆಗೆ ಅರ್ಥವಿದೆಯೇ? ಎಂದು ಸಾರ್ವಜನಿಕರು ಕೇಳುವಂತಾಗಿದೆ.
‘ತುರ್ತು ಸೇವೆಗೆ ಮಿನಿ ವಾಹನವನ್ನು ದಾವಣಗೆರೆಯಿಂದ ತಾತ್ಕಾಲಿಕವಾಗಿ ಪಡೆಯಲಾಗಿದೆ. ದೊಡ್ಡ ವಾಹನ ಸೇವೆ ಮುಗಿದ ನಂತರ 3 ತಿಂಗಳಲ್ಲಿ 70 ಅಗ್ನಿ ಅನಾಹುತ ಘಟನೆಗಳು ವರದಿಯಾಗಿದೆ. ಇದರಲ್ಲಿ ರಾಂಪುರದಲ್ಲಿ ಪೈಪ್ ದಾಸ್ತಾನು ಘಟಕದಲ್ಲಿ 2 ದೊಡ್ಡ ಅಗ್ನಿ ಅವಘಡ ಸೇರಿ 4 ದೊಡ್ಡ ಅವಘಡಗಳು ವರದಿಯಾಗಿವೆ. ಆಗ ಚಳ್ಳಕೆರೆ, ಬಳ್ಳಾರಿಯಿಂದ ವಾಹನ ವ್ಯವಸ್ಥೆ ಮಾಡಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.
‘ಈಗ ಅಗ್ನಿ ಅವಘಡ ವರದಿಯಾದಲ್ಲಿ ಚಳ್ಳಕೆರೆ, ಕೂಡ್ಲಿಗಿ, ಬಳ್ಳಾರಿ, ಆಂಧ್ರದ ರಾಯದುರ್ಗ ಠಾಣೆಯಿಂದ ವಾಹನ ಬರಬೇಕಿದೆ. ಕೆಲವೊಮ್ಮೆ ಮನವಿ ಮಾಡಿದರೂ ಬರುವುದಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಒಂದೊಂದೇ ದೊಡ್ಡ ವಾಹನ ಉಳಿದುಕೊಂಡಿವೆ. ಆದರೆ ಮೊಳಕಾಲ್ಮುರಿನಲ್ಲಿ ಮಾತ್ರ ಒಂದೂ ಇಲ್ಲದಿರುವುದು ಆಡಳಿತದ ಹಿತಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಈಗಿನ ಸ್ಥಿತಿಯಲ್ಲಿ ಕನಿಷ್ಠ 60–80 ಕಿ.ಮೀ. ದೂರದಿಂದ ತುರ್ತು ವಾಹನ ಬರಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ವಾಹನ ವ್ಯವಸ್ಥೆಗೆ ಮುಂದಾಗುವ ಮೂಲಕ ನೆರವಿಗೆ ಬರಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದು ರಾಜ್ಯಮಟ್ಟದ ಸಮಸ್ಯೆಯಾಗಿದೆ. 6 ತಿಂಗಳಲ್ಲಿ 100 ಹೊಸ ವಾಹನಗಳು ಬರಲಿವೆ. ಆಗ ಸಮಸ್ಯೆ ಇರುವ ಕಡೆ ನೀಡಲಾಗುತ್ತದೆ. ಅಲ್ಲಿಯವರೆಗೆ ಸಮಸ್ಯೆ ಎದುರಿಸುವುದು ಅನಿವಾರ್ಯಸೋಮಶೇಖರ ವಿ. ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಹಳೆ ವಾಹನಗಳ ವಾಪಸ್‌ಗೂ ಮುನ್ನ ಬದಲಿ ವಾಹನಗಳನ್ನು ನೀಡಬೇಕಿತ್ತು.ಕೂಡಲೇ ಪತ್ರ ಬರೆದು ಒಂದು ವಾಹನವಾದರೂ ತಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸುತ್ತೇನೆ.ಗೋವಿಂದ ಕಾರಜೋಳ ಸಂಸದ ಚಿತ್ರದುರ್ಗ
ಅಗ್ನಿಶಾಮಕ ಕಚೇರಿ ಆರಂಭವಾಗಿ 10 ವರ್ಷ ಕಳೆದರೂ ಪಟ್ಟಣ ಪಂಚಾಯಿತಿ ಈವರೆಗೂ ಪಟ್ಟಣದಲ್ಲಿ ತುರ್ತು ವಾಹನಗಳಿಗೆ ನೀರು ತುಂಬಿಸಿಕೊಳ್ಳುವ ಪಾಯಿಂಟ್ ಮಾಡಿಕೊಟ್ಟಿಲ್ಲ. ಕಚೇರಿ ಮತ್ತು ಸಿಬ್ಬಂದಿ ವಸತಿ ಗೃಹಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಘಟನಾ ಸ್ಥಳಕ್ಕೆ ಈಗಿರುವ ಮಿನಿ ತುರ್ತು ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋಗಲು ನಮಗೆ ನಾಚಿಕೆಯಾಗುತ್ತದೆ ಎಂದು ಸಿಬ್ಬಂದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.