
ಮೊಳಕಾಲ್ಮುರು: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಆರಾಧ್ಯ ದೈವ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು.
15 ದಿನಗಳ ಹಿಂದೆ ಮಾರಮ್ಮದೇವಿ ಸರಗ ಸಾರುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಪದ್ಧತಿಯಂತೆ ಭಾನುವಾರ ಬೆಳಿಗ್ಗೆ ಮುಖಂಡರು, ಯುವಕರು ಸಮೀಪದ ನುಂಕಿಮಲೆ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.
ಮೊದಲು ಹಾನಗಲ್ ರಸ್ತೆಯಲ್ಲಿರುವ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಳಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಬುಡಕಟ್ಟು ಸಂಸ್ಕೃತಿಗಳಾದ, ಚಾಮರ, ಕೊಡೆ, ನವಲುಗಡಿ, ತಪ್ಪಡೆ, ಡೊಳ್ಳು, ನಗಾರಿ, ಉರುಮೆ ಮುಂತಾದ ವಾದ್ಯಗಳ ಸಮ್ಮುಖದಲ್ಲಿ ನಂದಿಕೋಲು ಕುಣಿತಗಳ ಜತೆ ದೇವರ ಪಲ್ಲಕ್ಕಿ ಮೆರವಣಿಗೆ ಮುಖ್ಯಬೀದಿಗಳಲ್ಲಿ ಸಾಗಿತು. 3 ಗಂಟೆಗೂ ಹೆಚ್ಚು ಕಾಲ ಸಾಗಿದ ಮೆರವಣಿಗೆ ಕೋಟೆ ಬಡಾವಣೆಯಲ್ಲಿರುವ ನುಂಕಪ್ಪ ಕಟ್ಟೆ ಬಳಿ ಕೊನೆಯಾಯಿತು.
ನಂತರ ಸಮೀಪದ ಬೆಟ್ಟದಲ್ಲಿರುವ ಕಂಪಳರಂಗ ಸ್ವಾಮಿ ಬೆಟ್ಟಕ್ಕೆ ಗಂಗಾಪೂಜೆಗೆ ಸ್ವಾಮಿಯನ್ನು ಕರೆದುಕೊಂಡು ಹೋಗಲಾಯಿತು. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದೇವರು ವಾಪಾಸ್ ಆಗಲಿದ್ದು, ಕಟ್ಟೆ ಮೇಲೆ ಕೂರಿಸಿದ ನಂತರ ಭಕ್ತರಿಗೆ ದರ್ಶನ ಆರಂಭವಾಗಲಿದೆ. 2 ದಿನಗಳ ಕಾಲ ದರ್ಶನ ನೀಡಿದ ಬಳಿಕ ಗುರುವಾರ ಮರಳಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಗುಡಿದುಂಬಿಸುವ ಮೂಲಕ ತ್ರೈವಾರ್ಷಿಕ ಜಾತ್ರೆಗೆ ತೆರೆಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.