ADVERTISEMENT

ಬೆಳಕಿಗೆ ಬಾರದ ಶಿಲಾಯುಗ ಸಮಾಧಿಗಳು

ಮಾಹಿತಿ ಫಲಕ ನಿರ್ಮಿಸಿಲ್ಲ, ಸಂಪರ್ಕ ರಸ್ತೆ ದುಃಸ್ಥಿತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 26 ಏಪ್ರಿಲ್ 2022, 6:12 IST
Last Updated 26 ಏಪ್ರಿಲ್ 2022, 6:12 IST
ಮೊಳಕಾಲ್ಮುರು ತಾಲ್ಲೂಕಿನ ರೊಪ್ಪದಲ್ಲಿರುವ ಶಿಲಾಯುಗ ಕಾಲದ ಸಮಾಧಿಗಳು.
ಮೊಳಕಾಲ್ಮುರು ತಾಲ್ಲೂಕಿನ ರೊಪ್ಪದಲ್ಲಿರುವ ಶಿಲಾಯುಗ ಕಾಲದ ಸಮಾಧಿಗಳು.   

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿಯ ರೊಪ್ಪ ಗ್ರಾಮದಲ್ಲಿರುವ ಶಿಲಾಯುಗ ಕಾಲದ ಸಮಾಧಿಗಳ ಐತಿಹ್ಯ ಎಲೆಮರೆ ಕಾಯಿಯ ಸ್ಥಿತಿ ಎನ್ನುವಂತಾಗಿದೆ.

ಕ್ರಿಸ್ತ ಪೂರ್ವ 3ನೇ ಶತಮಾನ ಅವಧಿಯಲ್ಲಿ ಈ ಸಮಾಧಿಗಳು ನಿರ್ಮಾಣವಾಗಿವೆ ಎನ್ನಲಾಗಿದೆ. ಇದೇ ಅವಧಿಯಲ್ಲಿ ಸ್ಥಾಪಿಸಿರುವ ಅಶೋಕನ ಶಾಸನದಿಂದ 3 ಕಿ.ಮೀ ದೂರದಲ್ಲಿ ಈ ಸಮಾಧಿಗಳಿವೆ. ಈ ಸಮಾಧಿ ಸುತ್ತಲಿರುವ ಜಮೀನುಗಳಲ್ಲಿ ಸಹ ಅನೇಕ ಇದೇ ಕಾಲದ ಸಮಾಧಿಗಳಿವೆ. 50 ಕ್ಕೂ ಹೆಚ್ಚಿರುವ ಸಮಾಧಿಗಳ ಸ್ಥಳಕ್ಕೆ ಕಾಪೌಂಡ್ ನಿರ್ಮಿಸಿ ಸಂರಕ್ಷಣೆ ಮಾಡಲಾಗಿದೆ.

‘ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಈ ಸಮಾಧಿ ಸ್ಥಳದ ಸಂಪರ್ಕ ರಸ್ತೆ ದುರಸ್ತಿ ಮಾಡಿಲ್ಲ. ಸ್ಥಳ ಸೂಚನಾ ಫಲಕಗಳನ್ನು ಹಾಕಿಲ್ಲ. ಸಮಾಧಿ ಸ್ಥಳದಲ್ಲಿ ಸ್ಥಳದ ವೈಶಿಷ್ಟ್ಯ, ಯಾವ ಕಾಲದ್ದು ಎಂಬ ಬಗ್ಗೆ ವಿವರ ಹಾಕಿಲ್ಲ. ಇದರಿಂದ ಬರುವ ಪ್ರವಾಸಿಗರಿಗೆ ಸ್ಥಳದ ಐತಿಹ್ಯ ದೊರೆಯುತ್ತಿಲ್ಲ. ಕಾವಲುಗಾರ ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕ ಮಾಡದ ಕಾರಣ ದಾರಿ ಹೋಕರನ್ನು ವಿಚಾರಿಸುವ ಸ್ಥಿತಿಯಿದೆ’ ಎಂದು ಶಿಕ್ಷಕ ಓಬಣ್ಣ ಹೇಳಿದರು.

ADVERTISEMENT

‘ಈ ಶಿಲಾಯುಗ ಕಾಲದ ಸಮಾಧಿಗಳಲ್ಲಿ ನಿಧಿ ಇದೆ ಎಂಬ ವದಂತಿಯಿಂದ ಇವುಗಳ ತೆರವು ಘಟನೆಗಳು ಆಗಾಗ ನಡೆಯುತ್ತಿದ್ದ ಕಾರಣ 4 ವರ್ಷಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯು ದೊಡ್ಡ ಸಮಾಧಿಯೊಂದರ ಮೇಲ್ಭಾಗವನ್ನು ತೆರವು ಮಾಡಿ ಗಾಜಿನ ಸ್ಲ್ಯಾಬ್ ಹಾಕಿ ಸಾರ್ವಜನಿಕರ ವೀಕ್ಷಣೆಗೆ ಇಡಬೇಕು ಎಂದು ಕಾರ್ಯಕ್ರಮ ರೂಪಿಸಿತು. ಸಮಾಧಿಯೊಂದರ ಮೇಲ್ಭಾಗವನ್ನು ತೆರವು ಮಾಡಿ ಕಾರ್ಯವನ್ನು ಅರ್ಧಕ್ಕೆ ಸ್ಥಗಿತ ಮಾಡಿ ನಂತರ ಇದರ ಬಗ್ಗೆ ವಿರೋಧ ವ್ಯಕ್ತವಾದ ನಂತರ ಮೇಲ್ಭಾಗವನ್ನು ಮತ್ತೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ’ ಎಂದು ಕಸಾಪ ಖಜಾಂಚಿ ಶ್ರೀರಾಮುಲು ಮಾಹಿತಿ ನೀಡಿದರು.

ರೊಪ್ಪ ಸುತ್ತಲಿರುವ ಶಿಲಾಯುಗ ಸಮಾಧಿಗಳು ಪ್ರಕೃತಿ ಅರ್ಪಣೆ ಪದ್ಧತಿಯಂತೆ ಶವಸಂಸ್ಕಾರ ಮಾಡಲಾಗಿದೆ. ಶವಸಂಸ್ಕಾರಕ್ಕೂ ಮುನ್ನ ಶವವನ್ನು ಅರಣ್ಯದಲ್ಲಿ ಪ್ರಕೃತಿಗೆ ಅರ್ಪಣೆ ಮಾಡಿ ಪ್ರಾಣಿ, ಪಕ್ಷಿಗಳು ಸೇವಿಸಿ ಉಳಿದದನ್ನು ಸಂಸ್ಕಾರ ಮಾಡಲಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ಸಮಾಧಿಗಳ ಸಂರಕ್ಷಣೆಗೆ, ಸ್ಥಳದ ಮಹತ್ವದ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.