ADVERTISEMENT

ದೇಶದ ಅಭಿವೃದ್ಧಿಯ ದಿಕ್ಕು ತಪ್ಪಿಸಿದ್ದು ಕಾಂಗ್ರೆಸ್: ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:22 IST
Last Updated 18 ಸೆಪ್ಟೆಂಬರ್ 2021, 2:22 IST
ನಾಯಕನಹಟ್ಟಿ ಹೋಬಳಿಯ ಜೋಗಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿನೀಡಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ನಾಯಕನಹಟ್ಟಿ ಹೋಬಳಿಯ ಜೋಗಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿನೀಡಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.   

ನಾಯಕನಹಟ್ಟಿ: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸುವ ಮುನ್ನ ಕಾಂಗ್ರೆಸ್ ಸೇರಿದಂತೆ ದೇಶದಲ್ಲಿ ಇತರ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಯ ದಿಕ್ಕು ತಪ್ಪಿಸಿದ್ದವು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ಜೋಗಿಹಟ್ಟಿ ಗೊಲ್ಲರಹಟ್ಟಿಯಲ್ಲಿ ಬಿಜೆಪಿ ಮಂಡಲ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ನಿಗದಿಯಾಗಿದ್ದ ಕಲಂ. 370ರ ಕಾಯ್ದೆಯನ್ನು ರದ್ದುಗೊಳಿಸಿ ಕಾಶ್ಮೀರದ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಡಿದರು. ಅದಕ್ಕೂ ಮೊದಲು ಕಾಶ್ಮೀರದಲ್ಲಿ ಹಲವು ಬಾಂಬ್‌ ದಾಳಿಗಳು, ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಮೋದಿ ಪ್ರಧಾನಿಯಾದ ನಂತರ ಅಲ್ಲಿ ಬಾಂಬ್‌ಗಳ ಸದ್ದಿಲ್ಲ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಮಟ್ಟ ಹಾಕಲಾಗಿದೆ. ಆದರೆ ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಭಯೋತ್ಪಾದನೆಯಿಂದ ದೇಶ ನಲುಗಿ ಹೋಗಿತ್ತು. ಹೀಗೆ ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಗೆ ಮೋದಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಸೇರಿ ಇತರ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಯ ದಿಕ್ಕು ತಪ್ಪಿಸಿದ್ದವು. ಆದರೆ ಮೋದಿಯವರು ದೇಶವನ್ನು ಸಮಗ್ರ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.

ADVERTISEMENT

ಇದೇ ವೇಳೆ ಜೋಗಿಹಟ್ಟಿ ಗ್ರಾಮದ ಗೊಲ್ಲ ಸಮುದಾಯ ಮುಖಂಡ ಡಿ.ಜಿ. ಗೋವಿಂದಪ್ಪ ಮಾತನಾಡಿ, ‘ಜೋಗಿಹಟ್ಟಿ ಗ್ರಾಮವು ಹಿಂದುಳಿದಿದ್ದು, ಜೋಗಿಹಟ್ಟಿ ಗ್ರಾಮಕ್ಕೆ ಸರ್ಕಾರ ಪ್ರೌಢಶಾಲೆ ಮಂಜೂರು ಮಾಡಿಸಬೇಕು. ಗ್ರಾಮಕ್ಕೆ ಬಸ್‌ಗಳ ವ್ಯವಸ್ಥೆ ಇಲ್ಲ.
ಇರುವ ಒಂದು ಖಾಸಗಿ ಬಸ್‌ನಲ್ಲಿ ಪ್ರಯಾಣಿಕರ ಜತೆಗೆ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಒಂದೇ ಬಸ್‌ನಲ್ಲಿ ತೆರಳಬೇಕಾಗಿದೆ. ಇದರಿಂದ ಹಲವು ಬಾರಿ ಅಪಾಯ ಎದುರಾಗಿದೆ. ಹಾಗಾಗಿ ಸರ್ಕಾರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ಪರಿಶಿಷ್ಟರ ಕಾಲೊನಿಗೆ ಸಮುದಾಯ ಭವನ, ಆಂಜನೇಯ ದೇಗುಲ ಪುನರ್‌ನಿರ್ಮಾಣ ಆಗಬೇಕು’ ಎಂದು ಒತ್ತಾಯಿಸಿದರು.

ಜೋಗಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರು ‘ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ 244 ಮಕ್ಕಳು ಅಭ್ಯಾಸದಲ್ಲಿ ತೊಡಗಿದ್ದಾರೆ. ಅವರಿಗಾಗಿ ಸುಸಜ್ಜಿತವಾದ ಹೈಟೆಕ್ ಶೌಚಾಲಯ, 4 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮೂಲಕ ಮನವಿಪತ್ರ ಸಲ್ಲಿಸಿದರು.

ಒಂದೂವರೆ ತಿಂಗಳಲ್ಲಿ ನೇರ ರೈಲು ಮಾರ್ಗಕ್ಕೆ ಭೂಮಿಪೂಜೆ: ಸುಮಾರು 200 ಕಿ.ಮೀ ದೂರದ ಬೃಹತ್ ಯೋಜನೆ ಇದಾಗಿದ್ದು, ಪ್ರಸ್ತುತ ₹ 1,800 ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರ್ಕಾರ ದಿಂದ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ ದಾವಣಗೆರೆಯಿಂದ ಚಿತ್ರದುರ್ಗದ ಗಡಿಭಾಗದ ಸುಮಾರು 32 ಕಿ.ಮೀ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ₹ 25 ಕೋಟಿ, ತುಮಕೂರಿನಿಂದ ಹಿರಿಯೂರು ಗಡಿಭಾಗಕ್ಕೆ ₹ 35 ಕೋಟಿ, ಹಿರಿಯೂರಿನಿಂದ ಶಿರಾ ಗಡಿಭಾಗಕ್ಕೆ ₹ 100 ಕೋಟಿ, ಶಿರಾದಿಂದ ದಾವಣಗೆರೆ ಭಾಗಕ್ಕೆ ₹ 577 ಕೋಟಿ ವೆಚ್ಚವಾಗಲಿದೆ. ಈಗಾಗಲೇ ಸುಮಾರು 55 ಕಿ.ಮೀ. ಭೂಮಿಯನ್ನು ವಶಕ್ಕೆ ಪಡೆದಿದ್ದು, ಇನ್ನು ಒಂದೂವರೆ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು’ ಎಂದು ಹೇಳಿದರು.

*
ನ್ಯಾಯಯುತ ಮೀಸಲಾತಿ ದೊರೆಯಲಿ
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸು ಮತ್ತು ಜಾರಿಗೆ ಲಂಬಾಣಿ ಮತ್ತು ಭೋವಿ ಸಮುದಾಯಗಳಿಂದ ಅಪಸ್ವರಗಳಿದ್ದವು. ಆದರೆ ಚಿತ್ರದುರ್ಗದ ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಲಂಬಾಣಿ ಸಮುದಾಯದ ಮುಖಂಡರು ತುಂಬಾ ಪ್ರಜ್ಞಾಪೂರ್ವಕವಾಗಿ ಮಾತನಾಡಿದ್ದಾರೆ. ಸದಾಶಿವ ಆಯೋಗದ ವರದಿಯು ಮುಂದಿನ ದಿನಗಳಲ್ಲಿ ಸಾರ್ವಜನಿಕ ಚರ್ಚೆಯ ಬದಲು ಸದನದಲ್ಲಿ ಚರ್ಚೆಯಾಗಿಬೇಕು. ಸರ್ವ ಸದಸ್ಯರು ಅದರಲ್ಲಿರುವ ಲೋಪ–ದೋಷಗಳನ್ನು ಚರ್ಚಿಸಿ ಮೇಲ್ಮನೆ, ಕೆಳಮನೆಯಲ್ಲಿ ಕೂಲಂಕಷವಾಗಿ ಚರ್ಚೆಯಾಗಿ ಕೇಂದ್ರಕ್ಕೆ ಶಿಫಾರಸು ಆಗಬೇಕು. ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಮೀಸಲಾತಿ ಸೌಲಭ್ಯ ದೊರಬೇಕು ಎಂಬುದು ನನ್ನ ಆಶಯ. ಆ ದಿಕ್ಕಿನಲ್ಲಿ ಹೋರಾಟ ಸಾಗಲಿದೆ’

-ಎ.ನಾರಾಯಣಸ್ವಾಮಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.