ADVERTISEMENT

ಚಿತ್ರದುರ್ಗ: ಒಳಮೀಸಲಾತಿಗೆ ತೀರ್ಪು ‘ಮರುಜೀವ’; ಸಂಸದ ಎ.ನಾರಾಯಣಸ್ವಾಮಿ ಅಭಿಮತ

ಸುಪ್ರೀಂ ತೀರ್ಪಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 13:58 IST
Last Updated 28 ಆಗಸ್ಟ್ 2020, 13:58 IST
ಎ. ನಾರಾಯಣಸ್ವಾಮಿ.
ಎ. ನಾರಾಯಣಸ್ವಾಮಿ.   

ಚಿತ್ರದುರ್ಗ: ‘ಒಳಮೀಸಲು ನೀಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿರುವ ಸಂಸದ ಎ.ನಾರಾಯಣಸ್ವಾಮಿ, ‘25 ವರ್ಷಗಳಿಂದ ನಡೆದ ಹೋರಾಟಕ್ಕೆ ತೀರ್ಪು ಶಕ್ತಿ ತುಂಬಿದೆ. ಒಳಮೀಸಲಾತಿ ಪರಿಕಲ್ಪನೆಗೆ ಮರುಜೀವ ಸಿಕ್ಕಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲು ನೀಡಲು ಸಾಧ್ಯವಿಲ್ಲ ಎಂದು 2005ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ತೀರ್ಪು ಮರುಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು ಶೋಷಿತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಸಂವಿಧಾನದ 341, 342 ಹಾಗೂ 342 (2) ವಿಧಿಗಳ ವಿಸ್ತೃತವಾದ ಚರ್ಚೆಗೆ ಅವಕಾಶ ಕಲ್ಪಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಶೋಷಿತ ಸಮುದಾಯಗಳು ಒಳಮೀಸಲಾತಿ ಕಲ್ಪಿಸುವಂತೆ ಸರ್ಕಾರದ ಎದುರು ಬೇಡಿಕೆ ಇಡುತ್ತಿದ್ದವು. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ತೀವ್ರತರವಾದ ಹೋರಾಟ ನಡೆದಿದೆ. ಪಂಜಾಬ್‌, ಹಿಮಾಚಲಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಒಳಮೀಸಲಾತಿ ಬೇಡಿಕೆ ಮುನ್ನೆಗೆ ಬಂದಿತ್ತು. ಒಳಮೀಸಲಾತಿಗೆ ಕೆಲ ರಾಜ್ಯಗಳು ಸದನದ ಒಪ್ಪಿಗೆ ಕೂಡ ಪಡೆದಿದ್ದವು. ಕಾರಣಾಂತರದಿಂದ ಇದು ವಿಳಂಬವಾಗಿತ್ತು’ ಎಂದು ಹೇಳಿದರು.

ADVERTISEMENT

‘ಸುಪ್ರೀಂ ಕೋರ್ಟ್‌ 2004ರಿಂದ 2018ರವರೆಗೆ ವಿಸ್ತೃತವಾಗಿ ಚರ್ಚಿಸಿ ಪ್ರಕಟಿಸಿದ ತೀರ್ಪು ಪ್ರಸಂಶನೆಗೆ ಅರ್ಹವಾಗಿದೆ. ಶೋಷಿತ ಜಾತಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಆಶಾಭಾವನೆ ಮೂಡಿದೆ. ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಬಿಜೆಪಿ ಕೂಡ ಒಳಮೀಸಲಾತಿ ಪರವಾಗಿದ್ದು, ನ್ಯಾಯ ದೊರಕಿಸಿಕೊಡಲು ಬದ್ಧವಾಗಿದೆ’ ಎಂದು ಹೇಳಿದರು.

‘ಒಳಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಈವರೆಗೆ ಪ್ರಕಟಿಸಿದ ವರದಿಗಳನ್ನು ಸುಪ್ರೀಂ ಕೋರ್ಟ್‌ ವಿಮರ್ಶೆಗೆ ಒಳಪಡಿಸಬೇಕು. ಕೆನೆಪದರವು ಜಾತಿಗೆ ಸೀಮಿತವಾಗದೇ ಆರ್ಥಿಕ ಸ್ಥಿತಿಯೂ ಮಾನಂದಡವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ವರ್ಗಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಪರಿಗಣಿಸಿದ ಆರ್ಥಿಕ ಸ್ಥಿತಿಯನ್ನು ಕೆನೆಪದರಕ್ಕೂ ಅನ್ವಯಿಸಬೇಕು. ಆಗ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುತ್ತದೆ’ ಎಂದರು.

‘ಯಾರ ಮೀಸಲಾತಿ ಕಿತ್ತುಕೊಳ್ಳಲ್ಲ’

ಒಳಮೀಸಲಾತಿ ಸೌಲಭ್ಯವು ಯಾವ ಸಮುದಾಯದ ಮೀಸಲಾತಿ ಹಕ್ಕನ್ನು ಕಸಿಯುವುದಿಲ್ಲ. ಶೋಷಿತರಿಗೆ ಮಾತ್ರ ನ್ಯಾಯ ಒದಗಿಸುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.

‘ಸಮಾಜಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿತ್ತು. ಕೆಲವು ಸಮುದಾಯದ ಮೀಸಲಾತಿ ಹಕ್ಕು ಕಿತ್ತುಕೊಳ್ಳಲಾಗುತ್ತದೆ ಎಂಬ ಅಪಪ್ರಚಾರ ವ್ಯವಸ್ಥಿತವಾಗಿ ನಡೆಯಿತು. ಲಂಬಾಣಿ ಮತ್ತು ಭೋವಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ವದಂತಿ ಹಬ್ಬಿಸಲಾಗಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ನಾರಾಯಣಸ್ವಾಮಿ ಅವರ ಪುತ್ರಿ ಶೀತಲ್‌ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.