ADVERTISEMENT

ಕವಿ ಸಿದ್ಧಲಿಂಗಯ್ಯ ನಿಧನಕ್ಕೆ ಗಣ್ಯರ ಕಂಬನಿ

ದಲಿತರಲ್ಲಿ ಸ್ವಾಭಿಮಾನದ ಅರಿವು ಮೂಡಿಸಿದ್ದ ಮೇರುಕವಿ; ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 15:52 IST
Last Updated 11 ಜೂನ್ 2021, 15:52 IST
ಚಿತ್ರದುರ್ಗದ ಮುರುಘಾಮಠವೂ 2019ರ ಮುರುಘಾಶ್ರೀ ಪ್ರಶಸ್ತಿಯನ್ನು ಖ್ಯಾತ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ನೀಡಿದ ಕ್ಷಣ. ಶಿವಮೂರ್ತಿ ಮುರುಘಾ ಶರಣರು, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಇದ್ದಾರೆ. 
ಚಿತ್ರದುರ್ಗದ ಮುರುಘಾಮಠವೂ 2019ರ ಮುರುಘಾಶ್ರೀ ಪ್ರಶಸ್ತಿಯನ್ನು ಖ್ಯಾತ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ನೀಡಿದ ಕ್ಷಣ. ಶಿವಮೂರ್ತಿ ಮುರುಘಾ ಶರಣರು, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಇದ್ದಾರೆ.    

ಚಿತ್ರದುರ್ಗ: ದಲಿತರ ನೋವು-ಸಂಕಟಗಳನ್ನು ಅಕ್ಷರವಾಗಿಸಿದ ಸೂಕ್ಷ್ಮ ಸಂವೇದನೆಯ ಕವಿ ಡಾ.ಸಿದ್ಧಲಿಂಗಯ್ಯ ನಿಧನಕ್ಕೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

‘ಸವಾಲುಗಳ ವಿರುದ್ಧ ಹೋರಾಡುತ್ತಲೇ ಪರಿಶ್ರಮ, ಪ್ರತಿಭೆಯಿಂದಲೇ ಗೆದ್ದುಬಂದ ಸಿದ್ದಲಿಂಗಯ್ಯ ಅವರು ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದ ಸಿದ್ಧಲಿಂಗಯ್ಯ, ಸುದೀರ್ಘ ಸಾಹಿತ್ಯ ಪಯಣವೂ ಸತ್ವಪೂರ್ಣ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆಗಳ ಮೂಲಕ ದಲಿತರಲ್ಲಿ ಸ್ವಾಭಿಮಾನದ ಜಾಗೃತಿ ಮೂಡಿಸಿದ್ದ ಮೇರುಕವಿ’ ಎಂದು ಶರಣರು ಸ್ಮರಿಸಿದ್ದಾರೆ.

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ ಗೌರವಾನ್ವಿತ ಸ್ಥಾನ ಅಲಂಕರಿಸಿದ್ದರು. ಸಾಹಿತ್ಯ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ. ಅವರ ಅನುಪಮವಾದ ಕನ್ನಡಪರ ಸೇವೆ ಗುರುತಿಸಿ ಶ್ರೀಮಠವು 2019ರ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ನಿಧನ ಸುದ್ದಿ ಕೇಳಿ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಂತ್ಯಕ್ರಿಯೆ ಹೊಣೆ ಸರ್ಕಾರ ವಹಿಸಲಿ

‘ನಾಡಿನ ಖ್ಯಾತ ಕವಿ ಸಿದ್ಧಲಿಂಗಯ್ಯ ಅಗಲಿಕೆ ನಿಜಕ್ಕೂ ಲಕ್ಷಾಂತರ ಜನರಲ್ಲಿ ನೋವು ತಂದಿದೆ. ನನಗೂ ಆಘಾತ ಉಂಟಾಗಿದೆ. ಕವಿ, ಹೋರಾಟಗಾರ, ಸಾಹಿತಿಯಾಗಿ ಸಾಮಾಜಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ನಾಡು ಕಂಡ ಅಪರೂಪದ ಸಾಹಿತಿ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಸ್ಮರಿಸಿದ್ದಾರೆ.

‘ಕೋವಿಡ್ ಅಡ್ಡಿ ಇರದಿದ್ದಲ್ಲಿ ಅಭಿಮಾನಿಗಳೇ ಅವರ ಅಂತ್ಯಸಂಸ್ಕಾರದ ಹೊಣೆ ವಹಿಸಿಕೊಳ್ಳುತ್ತಿದ್ದರು. ಆದರೆ, ಸೋಂಕು ಭೀತಿಯ ಜೊತೆಗೆ ಮಾರ್ಗಸೂಚಿ ಪಾಲಿಸಬೇಕಾಗಿರುವುದರಿಂದ ಸಿದ್ದಲಿಂಗಯ್ಯ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದು ನೋವು ತೋಡಿಕೊಂಡಿದ್ದಾರೆ.

‘ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಆಥವಾ ಅಂಬೇಡ್ಕರ್ ಸ್ಕೂಲ್‌ ಆಫ್‌ ಎಕನಾಮಿಕ್ಸ್ ಆವರಣದಲ್ಲಿ ಅಂತ್ಯಕ್ರಿಯೆಗೆ ಸರ್ಕಾರ ಜಾಗ ಒದಗಿಸುವುದರ ಜೊತೆಗೆ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು. ಸಮಾಧಿ ಜಾಗವನ್ನು ಸಾಹಿತ್ಯ, ಹೋರಾಟ, ಚಿಂತನಾ ಸ್ಥಳವನ್ನಾಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬಹುಮುಖಿ ಪ್ರತಿಭೆಯ ಸಾಹಿತಿ

‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ದಿಕ್ಕು–ದೆಸೆಗಳನ್ನು ತೋರಿಸಿದವರು ಸಿದ್ದಲಿಂಗಯ್ಯ. ನವ್ಯೋತ್ತರ ಸಾಹಿತ್ಯ ಸಂದರ್ಭದ ಅಗ್ರಗಣ್ಯ ಕವಿಯಾಗಿ ದಲಿತ ಲೋಕದ ಅನುಭವ ಮುಂದಿಡುತ್ತಿದ್ದರು. ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯ ನಡುವೆ ಸಿದ್ಧಲಿಂಗಯ್ಯ ಅವರು ರಚಿಸುತ್ತಿದ್ದ ಕಾವ್ಯ ಅಪರೂಪದ್ದು’ ಎಂದು ಸಾಹಿತಿಗಳಾದ ಡಾ.ಬಿ.ಎಲ್.ವೇಣು, ಪ್ರೊ.ಚಂದ್ರಶೇಖರ ತಾಳ್ಯ, ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ, ಪ್ರೊ.ಎಚ್.ಲಿಂಗಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಪ್ರೊ.ಜಿ.ಪರಮೇಶ್ವರಪ್ಪ, ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂಸೆ, ದಬ್ಬಾಳಿಕೆ, ಕ್ರೌರ್ಯಕ್ಕೆ ಒಳಗಾದ ಶೋಷಿತ ಸಮುದಾಯದಲ್ಲಿ ಜನಿಸಿದ ಅವರಿಗೆ ಪ್ರತಿಭಟನೆ, ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ ತಿಳಿದಿತ್ತು. ಜನಪರ ಹೋರಾಟಗಾರರಾಗಿ, ನ್ಯಾಯಪರ ಚಿಂತಕರಾಗಿ, ಲೇಖಕರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.