ADVERTISEMENT

ಹಾಸ್ಯದ ಹೊನಲಿಗೆ ಮನಸೋತ ಪ್ರೇಕ್ಷಕರು

ನಗೆಗಡಲಲ್ಲಿ ತೇಲಿದ ನಾಯಕನಹಟ್ಟಿ ಜನರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:15 IST
Last Updated 22 ಜೂನ್ 2022, 2:15 IST
ನಾಯಕನಹಟ್ಟಿಯಲ್ಲಿ ಏರ್ಪಡಿಸಿದ್ದ ನಗೆಹಬ್ಬ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸುರೇಖಾ ಹೆಗಡೆ ಅವರು ಹಾಡು ಹಾಡಿದರು.
ನಾಯಕನಹಟ್ಟಿಯಲ್ಲಿ ಏರ್ಪಡಿಸಿದ್ದ ನಗೆಹಬ್ಬ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸುರೇಖಾ ಹೆಗಡೆ ಅವರು ಹಾಡು ಹಾಡಿದರು.   

ನಾಯಕನಹಟ್ಟಿ (ಚಿತ್ರದುರ್ಗ): ‘ಕೂಡಿ ನಕ್ಕರೆ ಅದೇ ಸ್ವರ್ಗ’ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವೆನಿಸಿತು. ತೇರುಬೀದಿಯಲ್ಲಿ ರಥ ಸಾಗುವುದನ್ನು ಕಂಡಿದ್ದ ಜನರು ಇದೇ ಮೊದಲ ಬಾರಿಗೆ ಹಾಸ್ಯದ ಹೊನಲು ಹರಿಯುವುದಕ್ಕೆ ಸಾಕ್ಷಿಯಾದರು. ನಗೆಗಡಲಲ್ಲಿ ತೇಲಿ ಹಗುರಾದರು.

ಇಲ್ಲಿನ ತೇರುಬೀದಿಯಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ, ನಾಯಕನಹಟ್ಟಿಯ ಹಟ್ಟಿಮಲ್ಲಪ್ಪನಾಯಕ ಸಂಘ ಹಾಗೂ ಚಳ್ಳಕೆರೆ ತಾಲ್ಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ನಗೆಹಬ್ಬ ಹಾಗೂ ಸಂಗೀತ ಸಂಜೆಯಲ್ಲಿ ಹಾಸ್ಯ ಕಲಾವಿದರಾದ ರಿಚರ್ಡ್‌ ಲೂಯಿಸ್‌, ಮೈಸೂರು ಆನಂದ್‌, ಕಿರ್ಲೋಸ್ಕರ್‌ ಸತ್ಯ ಹಾಗೂ ಮಿಮಿಕ್ರಿ ಗೋಪಿ ನಗೆಬುಗ್ಗೆ ಉಕ್ಕಿಸಿದರು.

‘ಹಿಂಗಾದ್ರೆ ಹೇಗೆ ಸ್ವಾಮಿ ಕನ್ನಡದ ಉದ್ಧಾರ..’ ಎಂಬ ಹಾಡಿನೊಂದಿಗೆ ಹಾಸ್ಯ ಸಮಾರಂಭ ಆರಂಭವಾಯಿತು. ಮೈಸೂರು ಆನಂದ್‌ ಹಾಗೂ ಕಿರ್ಲೋಸ್ಕರ್‌ ಸತ್ಯ ಅವರು ಹಾಡುತ್ತ ಕನ್ನಡ ಬಳಸಿ ಎಂಬ ಸಲಹೆ ನೀಡಿದರು.ಕನ್ನಡ ಮಾತನಾಡಿದರೆ ಭಾಷೆ ಉಳಿಯುತ್ತದೆ ಎಂಬ ಸಂದೇಶ ಸಾರಿದರು.

ADVERTISEMENT

‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’ ಹಾಡನ್ನು ಕಿರ್ಲೋಸ್ಕರ್‌ ಸತ್ಯ ಅವರು ಪಾಶ್ಚಾತ್ಯ, ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತದಲ್ಲಿ ಹಾಡಿದ ಪರಿಗೆ ಪ್ರೇಕ್ಷಕರು ನಕ್ಕು ನಲಿದರು. ಪಂಜಾಬಿ, ಕಂಸಾಳೆ ಪದಕ್ಕೆ ಸೇರಿಸಿ ಹಾಡಿದ ರೀತಿ ಅದ್ಭುತವಾಗಿತ್ತು. ಹಾಸ್ಯದ ಜೊತೆಗೆ ರಿಚರ್ಡ್‌ ಲೂಯಿಸ್‌ ಅವರು ಧರ್ಮ ಸಹಿಷ್ಣುತೆ, ನೈತಿಕತೆ, ದಾಂಪತ್ಯ ಜೀವನದ ಬಗ್ಗೆ ಹಿತವಚನಗಳನ್ನು ನುಡಿದರು.

ಪುಟಗೋಸಿ ನೆಗಡಿ: ‘ನಾನೊಮ್ಮೆ ಹುಷಾರು ತಪ್ಪಿದ್ದೆ. ನಡೆದುಕೊಂಡು ಹೋಗುತ್ತಿದ್ದೆ. ಸ್ನೇಹಿತ ಸಿಕ್ಕು ‘ಆನಂದ ಎಲ್ಲಗೊ ಹೋಗ್ತಾ ಇದ್ದೀಯಾ’ ಎಂದ. ‘ನೆಗಡಿಯಾಗಿದೆ, ಆಸ್ಪತ್ರೆಗೆ ಹೋಗುತ್ತಿದ್ದೇನೆ’ ಎಂದೆ. ನೆಗಡಿಗೆ ಆಸ್ಪತ್ರೆಗೆ ಹೋಗಬಾರದು, ನೇರವಾಗಿ ವೈನ್‌ಶಾಪ್‌ಗೆ ಹೋಗು ಎಂಬ ಸಲಹೆ ನೀಡಿದ. ‘ಅದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದೆ. ‘ಎಣ್ಣೆಗೆ ಹೊಲ, ಮನೆ, ಸಂಸಾರ ಸೇರಿ ಎಲ್ಲವೂ ಹೋಗಿವೆ. ಇನ್ನು ಪುಟಗೋಸಿ ನೆಗಡಿ ಹೋಗಲ್ಲವೇ’ ಎಂದು ಬಿಡಬೇಕಾ’ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.

ಸಿನಿಮಾದಲ್ಲಿ ಹಾಡು, ಸಂಗೀತ ಬದಲಾಗಿರುವ ಪರಿಯನ್ನು ನೃತ್ಯದೊಂದಿಗೆ ಪ್ರದರ್ಶಿಸಿದರು ಮೈಸೂರು ಆನಂದ್‌. ಮಿಮಿಕ್ರಿ ಗೋಪಿ ಹಲವು ಸಿನಿಮಾ ತಾರೆಯರ ಅಭಿನಯವನ್ನು ಅನುಕರಣೆ ಮಾಡಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮ ಸುಮಾರು ಮೂರೂವರೆ ಗಂಟೆ ಎಲ್ಲಿಯೂ ಕದಲದೇ ಹಾಸ್ಯದ ಹೊನಲಿನಲ್ಲಿ ತೇಲಿದರು. ಮಹಿಳೆಯರು, ವೃದ್ಧರು, ಮಕ್ಕಳು, ಯುವಕರು ಸೇರಿ ಎಲ್ಲ ವಯೋಮಾನದವರು ಸಮಾರಂಭಕ್ಕೆ ಸಾಕ್ಷಿಯಾದರು.

ಸಂಗೀತದ ರಸದೌತಣಕ್ಕೆ ತಲೆಬಾಗಿದ ಪ್ರೇಕ್ಷಕ

ಆಗಷ್ಟೇ ವರುಣನ ಸಿಂಚನವಾಗಿ ಭೂಮಿ ತೇವಗೊಂಡಿತ್ತು. ತೀಡಿ ಬೀಸುತ್ತಿದ್ದ ತಂಗಾಳಿಯಲ್ಲಿ ಮನಸ್ಸು ಪ್ರಫುಲ್ಲಗೊಂಡಿತ್ತು. ಸುರೇಖಾ ಹೆಗಡೆಯವರ ಕಂಠಸಿರಿಯಿಂದ ಹೊರಬರುತ್ತಿದ್ದ ಒಂದೊಂದೇ ಹಾಡುಗಳು ತೊರೆಯಾಗಿ ಹರಿಯತೊಡಗಿದವು. ತೇರುಬೀದಿಯಲ್ಲಿ ರಥ ಸಾಗುವುದನ್ನು ಕಂಡಿದ್ದ ನಾಯಕನಹಟ್ಟಿಯ ಜನರು ಸಂಗೀತದ ಜಲಪಾತವೊಂದು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡು ಪುಳಕಿತರಾದರು.

‘ಎದೆತುಂಬಿ ಹಾಡುವೆನು’ ಖ್ಯಾತಿಯ ಶಿವಮೊಗ್ಗದ ಸುರೇಖಾ ಹೆಗಡೆ ಹಾಗೂ ಪಾರ್ಥ ಚಿರಂತನ್‌ ಅವರು ಸುಮಾರು ಒಂದು ಗಂಟೆ ಕಾಲ ಸಂಗೀತದ ಹೊನಲು ಹರಿಸಿದರು. ಹತ್ತಾರು ಹಾಡುಗಳನ್ನು ಹಾಡಿ ರಂಜಿಸಿದರು. ಭಕ್ತಿ ಗೀತೆ, ಸುಗಮ ಸಂಗೀತ, ಸಿನಿಮಾ ಹಾಡುಗಳು ಹೃನ್ಮನ ತಣಿಸಿದವು.

‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ...’ ಹಾಡಿಗೆ ಪ್ರೇಕ್ಷಕರು ಪುನೀತ್‌ ರಾಜಕುಮಾರ್‌ ಅವರ ಫೋಟೊ ಹಿಡಿದು ಅಭಿಮಾನ ತೋರಿದರು. ಕೇಕೆ, ಚಪ್ಪಾಳೆ ಮಳೆ ಸುರಿಸಿದರು. ‘ಕರುಣಾಳು ಬಾ ಬೆಳಕೆ ಕೈಹಿಡಿದು ನಡೆಸೆನ್ನನು..’ ಹಾಡಿನಿಂದ ಆರಂಭವಾದ ಸಂಗೀತ ಕಾರ್ಯಕ್ರಮ ಜಿ.ಎಸ್‌.ಶಿವರುದ್ರಪ್ಪ ಅವರ ‘ಎದೆತುಂಬಿ ಹಾಡಿದೆನು ಅಂದು ನಾನು..’ ಗೀತೆಯೊಂದಿಗೆ ಮುಕ್ತಾಯವಾಯಿತು.

ಸುರೇಖಾ ಹೆಗಡೆ ಅವರು ‘ತೆರೆದಿದೆ ಮನ ಓ ಬಾ ಅತಿಥಿ..’ ಎಂದು ಹಾಡಿದರೆ, ಪಾರ್ಥ ಚಿರಂತನ್‌ ಅವರು ‘ಶ್ರಾವಣ ಬಂತು ಶ್ರಾವಣ...’ ಹಾಡಿ ರಂಜಿಸಿದರು. ಕೆ.ಎಸ್‌.ನರಸಿಂಹಸ್ವಾಮಿ ರಚನೆಯ ಸಿ. ಅಶ್ವತ್ಥ್‌ ಅವರ ‘ಒಂದಿರುಳು ಕನಸಿನಲಿ...’ ಹಾಡಿಗೆ ಪ್ರೇಕ್ಷಕರು ಕರತಾಡನ ಮಾಡಿದರು. ‘ಒಳಿತು ಮಾಡು ಮನುಜ ನೀನು ಇರೋದು ಮೂರು ದಿವಸ..’, ‘ಏನು ಕೊಡ ಏನು ಕೊಡವ್ವ..’ ಹಾಡುಗಳ ರಸದೌತಣ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.