ADVERTISEMENT

ಗ್ಯಾರೆಹಳ್ಳಿ: ನಂದಿ ಪರಮೇಶ್ವರ ಸ್ವಾಮಿಯ ಕೆಂಡಾರ್ಚನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:35 IST
Last Updated 23 ಏಪ್ರಿಲ್ 2024, 14:35 IST
ಚಿಕ್ಕಜಾಜೂರು ಸಮೀಪದ ಗ್ಯಾರೆಹಳ್ಳಿ ಗ್ರಾಮದಲ್ಲಿ ಮಂಗಳವಾರ ನಂದಿ ಪರಮೇಶ್ವರ ಸ್ವಾಮಿಯ ಕೆಂಡಾರ್ಚನೆ ನಡೆಯಿತು.
ಚಿಕ್ಕಜಾಜೂರು ಸಮೀಪದ ಗ್ಯಾರೆಹಳ್ಳಿ ಗ್ರಾಮದಲ್ಲಿ ಮಂಗಳವಾರ ನಂದಿ ಪರಮೇಶ್ವರ ಸ್ವಾಮಿಯ ಕೆಂಡಾರ್ಚನೆ ನಡೆಯಿತು.   

ಚಿಕ್ಕಜಾಜೂರು: ನಂದಿ ಪರಮೇಶ್ವರ ಸ್ವಾಮಿಯ ಕೆಂಡಾರ್ಚನೆ ಶ್ರದ್ಧಾ ಭಕ್ತಿಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಸಮೀಪದ ಗ್ಯಾರೆಹಳ್ಳಿ ಗ್ರಾಮದ ನಂದಿ ಪರಮೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿನ ಅಗ್ನಿಕುಂಡಕ್ಕೆ ಬೆಂಕಿ ಹಾಕಲಾಯಿತು. ನಂದಿ ಪರಮೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂದಿಕೋಲು ಕುಣಿತ, ಚಮೇಳ, ಮದ್ದಳೆ ವಾದ್ಯಗಳೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ದೇವಸ್ಥಾನದ ಬಳಿ ಬರುವ ವೇಳೆಗೆ ದೇವಸ್ಥಾನದ ಅರ್ಚಕರು, ಅಗ್ನಿಕುಂಡದ ಸುತ್ತ ಅರಿಸಿನ – ಕುಂಕುಮಗಳಿಂದ ರಂಗೋಲಿ ಬಿಡಿಸಿ, ಅಷ್ಠ ದಿಕ್ಕುಗಳಿಗೂ ಎಡೆ ಹಾಕಿ, ಕಾಯಿಗಳನ್ನು ಒಡೆದು ಮಹಾ ಮಂಗಳಾರತಿ ಮಾಡಿದರು. ನಂತರ, ಭಕ್ತರ ಹರ್ಷೋದ್ಗಾರದ ನಡುವೆ ವಿಶೇಷ ಉಡುಗೆ ಧರಿಸಿದ್ದ ಅರ್ಚಕರು ಅಗ್ನಿ ಕುಂಡವನ್ನು ಹಾಯ್ದರು.

ADVERTISEMENT

ಹಿಂದೆಯೇ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಅಗ್ನಿಕುಂಡವನ್ನು ಮೂರು ಬಾರಿ ಹಾಯ್ದರು. ಈ ಧಾರ್ಮಿಕ ದೃಶ್ಯವನ್ನು ನೆರೆದಿದ್ದ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಕಣ್ತುಂಬಿಕೊಂಡು ದೇವರಿಗೆ ಭಕ್ತಿ ಸಮರ್ಪಿಸಿದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಪೂಜೆಗಾಗಿ ಗ್ರಾಮದಲ್ಲಿ ₹ 6 ಲಕ್ಷ ವೆಚ್ಚದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಪುಷ್ಕರಣಿಯನ್ನು ಗಂಗಾ ಪೂಜೆ ಹಾಗೂ ವಿಶೇಷ ಪೂಜೆಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.