
ಚಿತ್ರದುರ್ಗ: ‘ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಸದ್ಯ 49,017 ಪ್ರಕರಣಗಳು ಬಾಕಿಯಿದ್ದು, ಆ ಪೈಕಿ 3,137 ಪ್ರಕರಣಗಳನ್ನು ಡಿ.13ರಂದು ನಡೆಯಲಿರುವ ರಾಷ್ಟ್ರೀಯ ಅದಾಲತ್‍ನಲ್ಲಿ ಇತ್ಯರ್ಥಗೊಳಿಸಲು ಗುರುತಿಸಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.
‘ಜುಲೈ 12 ರಂದು ನಡೆದ ಲೋಕ ಅದಾಲತ್ ಸಂದರ್ಭದಲ್ಲಿ, ಚಾಲ್ತಿಯಲ್ಲಿ ಇದ್ದ 2,848 ಪ್ರಕರಣಗಳನ್ನು ಹಾಗೂ 94,782 ವ್ಯಾಜ್ಯಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 3 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘5,566 ಚೆಕ್ ಅಮಾನ್ಯೀಕರಣ ಪ್ರಕರಣಗಳಲ್ಲಿ 402, ರಾಜಿಯಾಗಬಹುದಾದ 227 ಕ್ರಿಮಿನಲ್ ಪ್ರಕರಣಗಳಲ್ಲಿ 37, ಆಸ್ತಿ ವಿಭಾಗದ 4,279 ಪ್ರಕರಣಗಳ ಪೈಕಿ 353, ಮೋಟಾರು ವಾಹನ ಕಾಯ್ದೆಯಡಿ ದಾಖಲಾದ 389 ಪ್ರಕರಣಗಳ ಪೈಕಿ 92, ನಿರ್ದಿಷ್ಟ ಪರಿಹಾರ ಕೋರಿರುವ 836 ಪ್ರಕರಣಗಳ ಪೈಕಿ 64, ಗಣಿಗಾರಿಕೆಗೆ ಸಂಬಂಧಿಸಿದ 112 ಪ್ರಕರಣಗಳಲ್ಲಿ 1 ಹಾಗೂ ವೈವಾಹಿಕ ಸಂಬಂಧದ 877 ಪ್ರಕರಣಗಳ ಪೈಕಿ 60 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ’ ಎಂದರು.
‘ಜುಲೈ 1 ರಿಂದ ನ.14 ವರಗಿನ 90 ದಿನಗಳ ಅವಧಿಯಲ್ಲಿ, ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ 71 ಪಕ್ರರಣಗಳನ್ನು ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಚಾಲ್ತಿಯಿದ್ದ 1,545 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 30 ಚೆಕ್ ಅಮಾನ್ಯ, 6 ಮೋಟಾರ್ ಕಾಯ್ದೆ, 5 ಕೌಟುಂಬಿಕ, 16 ಪಾಲು ವಿಭಾಗ ಹಾಗೂ 14 ಸಿವಿಲ್ ಪ್ರಕರಣಗಳು ಸೇರಿ 71 ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಇನ್ನೂ 10 ದಿನಗಳ ಕಾಲ ಅಭಿಯಾನ ನಡೆಯಲಿದ್ದು, ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡುವ ವಿಶ್ವಾಸವಿದೆ’ ಎಂದರು.
‘ರಾಷ್ಟ್ರೀಯ ಲೋಕ ಅದಾಲತ್‍ನ ಸದುಪಯೋಗ ಪಡಿಸಿಕೊಂಡು ಪಕ್ಷಕಾರರು ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‍ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಇ-ಮೇಲ್ dlsachitradurga3@gmail.com, ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊ; 9141193935 ಸಂಪರ್ಕಿಸಬಹುದು’ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.