
ನಾಯಕನಹಟ್ಟಿ: ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ಪರಶುರಾಂಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಹಲವು ಕಳ್ಳತನಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ತಳಕು ಪೊಲೀಸರು ಶನಿವಾರ ಬಂಧಿಸಿದ್ದು, ಕದ್ದಿದ್ದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನಗರದ ಕೇತಿರೆಡ್ಡಿ ಕಾಲೋನಿ ನಿವಾಸಿಯಾದ ಪೈಂಟಿಂಗ್ ಕೆಲಸ ಮಾಡುವ ಶೇಖ್ ಖಾಜಾಪೀರ್ (32) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಶೇಖ್‌ಖಾಜಾಪೀರ್ ನ.1ರ ಸಂಜೆ 4 ಗಂಟೆ ವೇಳೆಗೆ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೂರು ಗ್ರಾಮದ ನಿವಾಸಿ ಧನಂಜಯರೆಡ್ಡಿ ಅವರ ಮನೆಗೆ ನುಗ್ಗಿ, ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ₹ 5,000 ನಗದು ಮತ್ತು ₹ 40,000 ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ತಳಕು ಪೊಲೀಸರು ಮೊಬೈಲ್ ಸಿಗ್ನಲ್ ಜಾಡುಹಿಡಿದು ಕಾರ್ಯಾಚರಣೆ ಆರಂಭಿಸಿದ್ದರು. ಇದೇ ಮಾದರಿಯಲ್ಲಿ ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. ಹಾಗಾಗಿ ತಳಕು ಮತ್ತು ಪರಶುರಾಂಪುರ ಪೊಲೀಸರು ಜಂಟಿಯಾಗಿ ತನಿಖಾ ತಂಡ ರಚಿಸಿಕೊಂಡು ಆಂಧ್ರಪದೇಶಕ್ಕೆ ತೆರಳಿ ಕಳ್ಳತನ ಮಾಡಿದ್ದ ಶೇಖ್ ಖಾಜಾಪೀರ್‌ನನ್ನು ಬಂಧಿಸಿ, ಆತನಿಂದ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೂರಿನಲ್ಲಿ ಕದ್ದಿದ್ದ ₹70,000 ಮೌಲ್ಯದ ಚಿನ್ನಾಭರಣ ಮತ್ತು 2,000 ನಗದು, ಪರಶುರಾಂಪುರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ಕದ್ದಿದ್ದ ₹ 3.50 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಶಿವಕುಮಾರ್ ಅವರ ಮಾರ್ಗದರ್ಶನ ಮತ್ತು ಡಿವೈಎಸ್‌ಪಿ ಸತ್ಯನಾರಾಯಣರಾವ್ ನಿರ್ದೇಶನ ಮೇರೆಗೆ ಸಿಪಿಐ ಹನುಮಂತಪ್ಪ ಎಂ. ಶಿರೀಹಳ್ಳಿ, ಪಿಎಸ್‌ಐ ಕೆ.ಶಿಕುಮಾರ್, ಪ್ರೊಬೇಷನರಿ ಪಿಎಸ್‌ಐ ಚೇತನ್, ಎಎಸ್‌ಐ ಮಂಜಣ್ಣ, ಕನ್ಸ್‌ಟೆಬಲ್ ಧನಂಜಯ, ನಿತಿನ್‌ಕುಮಾರ್, ಜಾಕೀರ್‌ಹುಸೇನ್, ಮಂಜುನಾಥ, ವೀರಭದ್ರಪ್ಪ, ಜಗದೀಶ್, ವೀರೇಶ್, ಮಾರೇಶ್, ಪರಶುರಾಂಪುರ ಪಿಎಸ್‌ಐ ಮಾರುತಿ, ಸಿಬ್ಬಂದಿ ಏಕಾಂತರೆಡ್ಡಿ, ಮಂಜುನಾಥ ಮುಡಕೆ ಜಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.