ADVERTISEMENT

ರಾತ್ರಿ ಇಡೀ ದೀಪ ಹಚ್ಚಿ ಕುಳಿತ ಮಹಿಳೆಯರು

ಧಾರ್ಮಿಕ ಕ್ಷೇತ್ರದಲ್ಲಿ ದೀಪಗಳು ನಂದಿ ಹೋಗಿವೆ ಎಂಬ ವದಂತಿಗೆ ಕಿವಿಗೊಟ್ಟ ಜನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 14:04 IST
Last Updated 27 ಮಾರ್ಚ್ 2020, 14:04 IST
ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮನೆಯೊಂದರ ಅಂಗಳದಲ್ಲಿ ಗುರುವಾರ ರಾತ್ರಿ ದೀಪ ಹಚ್ಚಿರುವುದು
ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮನೆಯೊಂದರ ಅಂಗಳದಲ್ಲಿ ಗುರುವಾರ ರಾತ್ರಿ ದೀಪ ಹಚ್ಚಿರುವುದು   

ನಾಯಕನಹಟ್ಟಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಗರ್ಭಗುಡಿಯಲ್ಲಿ ದೀಪಗಳು ನಂದಿ ಹೋಗಿವೆ ಎಂಬ ವಂದತಿಗೆ ಕಿವಿಗೊಟ್ಟು ಮಹಿಳೆಯರು ಗುರುವಾರ ರಾತ್ರಿ ಇಡೀ ಮನೆಯ ಮುಂದೆ ದೀಪಹಚ್ಚಿ ಕುಳಿತರು.

ಮಧ್ಯರಾತ್ರಿ 2:30ರ ವೇಳೆಗೆ ಯಾರೋ ಅಪರಿಚಿತರು ಧರ್ಮಸ್ಥಳ, ತಿರುಪತಿ, ಶೀಶೈಲ ಕ್ಷೇತ್ರದಲ್ಲಿ ಗರ್ಭಗುಡಿಯ ದೀಪಗಳು ನಂದಿ ಹೋಗಿವೆ. ಇದು ಅಪಶಕುನದ ಸಂಕೇತ. ಹಾಗಾಗಿ ಮನುಷ್ಯರಿಗೆ ಗಂಡಾಂತರ ಒದಗಿದೆ. ಅದಕ್ಕೆ ಪರಿಹಾರವಾಗಿ ರಾತ್ರಿಯೇ ಎಲ್ಲರ ಮನೆಯ ಮುಂದೆ ದೀಪಗಳನ್ನು ಹಚ್ಚಿಡಬೇಕು ಎಂಬ ವದಂತಿ ಹಬ್ಬಿಸಿದ್ದಾರೆ.

ಮಹಿಳೆಯರು ರಾತ್ರಿ ಇಡೀ ತಮ್ಮ ಮನೆಯ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ದೀಪ ಹಚ್ಚಿ, ಪೂಜೆ ನೆರವೇರಿಸಿದರು. ದೀಪ ಆರಿಹೋಗದಂತೆ ನೋಡಿಕೊಂಡರು. ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿದರು. ಇದರಿಂದ ನಾಯಕನಹಟ್ಟಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರಾತ್ರಿ ವೇಳೆ ನಿದ್ದೆಗೆಟ್ಟು ದೀಪ ಹಚ್ಚಿದರು.

ADVERTISEMENT

ಗಂಡು ಮಕ್ಕಳಿಗೆ ದೋಷವಿದೆ ಎಂಬ ವದಂತಿ: ಒಬ್ಬ ತಾಯಿಗೆ ಒಬ್ಬನೇ ಗಂಡು ಮಗನಿದ್ದರೆ ಅವನಿಗೆ ದೋಷ ಇದೆ. ಹಾಗಾಗಿ ತಾಯಿಯು ದೋಷ ಪರಿಹಾರಕ್ಕೆ ಮೂರು ಮನೆಗಳಿಂದ ಅಕ್ಕಿಯನ್ನು ಸಂಗ್ರಹಿಸಿಕೊಂಡು ಬಂದು ಸಮೀಪದ ದೇವಾಲಯಕ್ಕೆ ತೆರಳಿ ದೇವರ ಮುಂದೆ ಅಕ್ಕಿ ಸುರಿದು ಪೂಜೆ ನೆರವೇರಿಸಬೇಕು. ನಂತರ ಆ ತಾಯಿಗೆ ಸಂಬಂಧಿಕರು ಸೀರೆಯನ್ನು ಉಡುಗೊರೆಯಾಗಿ ನೀಡಬೇಕು. ಜತೆಗೆ ಗಂಡು ಮಗನಿಗೆ ಅತ್ತೆಯಾದವರು ಬೆಳ್ಳಿ ಕಡಗವನ್ನು ಉಡುಗೊರೆಯಾಗಿ ನೀಡಬೇಕು ಎಂಬ ಹಲವು ವದಂತಿಗಳು ರಾತ್ರಿ ವೇಳೆ ಕೇಳಿ ಬಂದ ಹಿನ್ನೆಲೆಯಲ್ಲಿ ಮಹಿಳೆಯರು ಮನೆಗಳ ಬಾಗಿಲು ಬಡಿದು ಅಕ್ಕಿ ಭಿಕ್ಷೆ ಪಡೆದು ದೇವಾಲಯಕ್ಕೆ ಅರ್ಪಿಸಿ ಪೂಜೆ ನೆರವೇರಿಸಿದರು.

ಕಳೆದ ವರ್ಷ ಮಧ್ಯರಾತ್ರಿ ಹೆಂಗೆಳೆಯರ ತಾಳಿಯಲ್ಲಿರುವ ಹವಳವನ್ನು ಕುಟ್ಟಿ ಪುಡಿಮಾಡುವಂತೆ ಹಬ್ಬಿದ ವದಂತಿಗೆ ಬಹುತೇಕ ಮಹಿಳೆಯರ ತಾಳಿಯ ಜತೆಗಿದ್ದ ಹವಳವನ್ನು ಕುಟ್ಟಿ ಪುಡಿ ಮಾಡಿದ್ದರು. ಹೀಗೆ ಹಲವು ಬಾರಿ ಹಬ್ಬಿರುವ ಸುಳ್ಳು ವದಂತಿಗಳಿಗೆ ಕಿವಿಗೊಟ್ಟ ಗ್ರಾಮೀಣ ಮಹಿಳೆಯರು ಮೌಢ್ಯಕ್ಕೆ ಶರಣಾಗುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿರುವುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.