
ನಾಯಕನಹಟ್ಟಿ: ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು, ಅಗ್ನಿ ಶಾಮಕ ಠಾಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಘಟಕದ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಇ.ನಾಗರಾಜ ಮೀಸೆ ಮಾತನಾಡಿ, ನಾಯಕನಹಟ್ಟಿ ಪಟ್ಟಣವು ಮಧ್ಯ ಕರ್ನಾಟಕದಲ್ಲಿ ಇತಿಹಾಸ ಪ್ರಸಿದ್ಧಿಯನ್ನು ಪಡೆದಿದೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಿದ್ದು, ನಿತ್ಯ ಗುರುತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪಟ್ಟಣದಲ್ಲಿ ಇಲ್ಲಿಯವರೆಗೂ ಒಂದ ಸುಸಜ್ಜಿತವಾದ ಸರ್ಕಾರಿ ಬಸ್ ನಿಲ್ದಾಣವಿಲ್ಲ. ಇದರಿಂದ ಪ್ರವಾಸಿಗರಿಗೆ, ಭಕ್ತರಿಗೆ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಇಲ್ಲಿ ಖಾಸಗಿ, ಅನುದಾನಿತ ಪ್ರೌಢಶಾಲೆ ಮತ್ತು ಕಾಲೇಜುಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪಿಯು ಮತ್ತು ಪದವಿ ಶಿಕ್ಷಣಕ್ಕಾಗಿ ಚಳ್ಳಕೆರೆ, ಚಿತ್ರದುರ್ಗಕ್ಕೆ ತೆರಳಿ ವಿದ್ಯಾಭ್ಯಾಸ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
5 ವರ್ಷಗಳಿಂದ ಚಳ್ಳಕೆರೆ ತಾಲ್ಲೂಕಿನ ಮೂರು ಕಡೆಗಳಲ್ಲಿ ಕೆಪಿಎಸ್ ಶಾಲೆಗಳು ಮಂಜೂರಾಗಿದೆ. ಆದರೆ, ನಾಯಕನಹಟ್ಟಿಗೆ ಇಲ್ಲ. ಅಗ್ನಿಶಾಮಕ ಠಾಣೆಗೆ ಈಗಾಗಲೇ ಪಟ್ಟಣದ ಹೊರವಲಯದಲ್ಲಿ ಜಾಗ ಗುರುತಿಸಲಾಗಿದೆ. 10 ವರ್ಷಗಳಿಂದ ಠಾಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ಇದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿ ದಿನಗಳಲ್ಲಿ ನಾಯಕನಹಟ್ಟಿಯಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ.ಪಂ.ಮುಖ್ಯಾಧಿಕಾರಿ ಒ.ಶ್ರೀನಿವಾಸ್, ಉಪ ತಹಶೀಲ್ದಾರ್ ಬಿ.ಶಕುಂತಲಾ ಸ್ಥಳಕ್ಕಾಗಮಿಸಿ ಉಪವಾಸನಿರತರ ಅಹವಾಲುಗಳನ್ನು ಆಲಿಸಿ ಬೇಡಿಕೆಗಳ ಈಡೇರಿಕೆಗೆ ಅಧಿಕಾರಿಗಳು ಮತ್ತು ಶಾಸಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರೈತಸಂಘದ ಪಾದಾಧಿಕಾರಿಗಳಾದ ನಿಜಲಿಂಗಪ್ಪ, ನಾಗಭೂಷಣ್, ನವೀನ್, ಜಿ.ಟಿ.ಪಾಟೇಲ್, ವಿಜಯಲಕ್ಷ್ಮಿ, ಪಾಪಣ್ಣ, ತಿಪ್ಪೇಸ್ವಾಮಿ, ವೀರೇಶ್, ಮುತ್ತಯ್ಯ, ಮಂಜುನಾಥ, ಕೆ.ಪಿ. ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.