ADVERTISEMENT

ನಾಯಕನಹಟ್ಟಿ | ಬಾಯಾರಿದೆ ಪಟ್ಟಣ: ಶುದ್ಧ ಕುಡಿಯುವ ನೀರು ಕೊಡಿ

ವಿ.ಧನಂಜಯ
Published 5 ಮಾರ್ಚ್ 2025, 6:15 IST
Last Updated 5 ಮಾರ್ಚ್ 2025, 6:15 IST
ನಾಯಕನಹಟ್ಟಿ ಪಟ್ಟಣದ 7ನೇ ವಾರ್ಡಿನಲ್ಲಿ ನಿರ್ಮಾಣದ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ
ನಾಯಕನಹಟ್ಟಿ ಪಟ್ಟಣದ 7ನೇ ವಾರ್ಡಿನಲ್ಲಿ ನಿರ್ಮಾಣದ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ   

ನಾಯಕನಹಟ್ಟಿ: ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದ ಪರಿಣಾಮ ಸಾರ್ವಜನಿಕರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 16 ವಾರ್ಡ್‌ಗಳಿದ್ದು, ಕ್ರಮವಾಗಿ 1ರಿಂದ 4ನೇ ವಾರ್ಡ್‌ಗಳು ಜಾಗನೂರಹಟ್ಟಿ, ಮಾದಯ್ಯನಹಟ್ಟಿ, ಕಾವಲುಬಸವೇಶ್ವರ ನಗರ, ಚನ್ನಬಸಯ್ಯನಹಟ್ಟಿ, ಗಂಗಯ್ಯನಹಟ್ಟಿ, ಕೊಂಡಯ್ಯನಕಪಿಲೆ ಮತ್ತು 15 ಮತ್ತು 16ನೇ ವಾರ್ಡ್‌ಗಳಲ್ಲಿ ಮಾಳಪ್ಪನಹಟ್ಟಿ, ಬೋಸೆದೇವರಹಟ್ಟಿ ಗ್ರಾಮಗಳನ್ನು ಹೊಂದಿದೆ.

ಇನ್ನು ಉಳಿದ 10 ವಾರ್ಡ್‌ಗಳು ನಾಯಕನಹಟ್ಟಿ ಪಟ್ಟಣವನ್ನು ಒಳಗೊಂಡಿದೆ. ಈ ಎಲ್ಲ ವಾರ್ಡ್‌ಗಳಿಗೆ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತದೆ. ಈ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ವಾಸ್ತವಾಂಶ ಅರಿತ ಪಟ್ಟಣ ಪಂಚಾಯಿತಿಯು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಸಲುವಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

ADVERTISEMENT

ಜಿಲ್ಲಾಡಳಿತ ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ₹ 12 ಲಕ್ಷ ವೆಚ್ಚದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಒಟ್ಟು ₹ 60ಲಕ್ಷ ಅನುದಾನಕ್ಕೆ ಅನುಮೋದನೆ ನೀಡಿತು. ಘಟಕಗಳ ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು. ಪಟ್ಟಣ ಪಂಚಾಯಿತಿಯಿಂದ 5 ಕಡೆಗಳಲ್ಲಿ ಸ್ಥಳವನ್ನು ಗುರುತಿಸಿ ನಿರ್ಮಿತಿ ಕೇಂದ್ರಕ್ಕೆ ಭೂಮಿಯನ್ನು ಹಸ್ತಾಂತರಿಸಲಾಯಿತು.

ಇನ್ನೇನು ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ ಎನ್ನುವ ವೇಳೆಗೆ ನಿರ್ಮಿತಿ ಕೇಂದ್ರ ಹಲವು ತಾಂತ್ರಿಕ ತೊಂದರೆ ಮುಂದಿಟ್ಟು ಕಾಮಗಾರಿ ನಿಲ್ಲಿಸಿತ್ತು. ಜತೆಗೆ ಮೇಲ್ವಿಚಾರಣೆಯ ಹೊಣೆಯಿಂದ ನುಣುಚಿಕೊಂಡಿತು. ಹೀಗೆ ನಾಲ್ಕು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದ ಪರಿಣಾಮ ನಿರ್ಮಾಣದ ಹಂತದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಕೊಠಡಿಗಳು ಪಾಳುಬಿದ್ದಿವೆ.

ಪಟ್ಟಣಪಂಚಾಯಿತಿ ವ್ಯಾಪ್ತಿಯ 5 ಸ್ಥಳಗಳಲ್ಲಿ ಜನವಸತಿ ಪ್ರದೇಶದಲ್ಲಿ ಸುಸಜ್ಜಿತವಾದ ಭೂಮಿಯನ್ನು ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿದ ಬಗ್ಗೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ದಾಖಲೆಗಳು ಇವೆ. ಆದರೆ ಕಾಮಗಾರಿಯ ಗುತ್ತಿಗೆದಾರರು, ಯಂತ್ರೋಪಕರಣ ಹಾಗೂ ಗುತ್ತಿಗೆಯ ಮುಕ್ತಾಯದ ಅವಧಿ ಸೇರಿದಂತೆ ಯಾವುದೇ ಮಾಹಿತಿ ಇಲ್ಲ. ಸಾರ್ವಜನಿಕರಿಗೆ ಬಳಕೆಯಾಗಬೇಕಿದ್ದ ಅಮೂಲ್ಯವಾದ ಅನುದಾನ ವ್ಯರ್ಥವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿದ್ದರೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ. ಈ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು
ಟಿ.ಮಂಜುಳಾ ಶ್ರೀಕಾಂತ್ ಅಧ್ಯಕ್ಷೆ ಪಟ್ಟಣ ಪಂಚಾಯಿತಿ
ಪಟ್ಟಣದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅವುಗಳಲ್ಲಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನೆರಡು ತಾಂತ್ರಿಕ ದೋಷದಿಂದ ನಿಂತಿವೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ದುಸ್ತರವಾಗಿದೆ
ಪಿ.ರುದ್ರೇಶ ಗ್ರಾಮಸ್ಥ

ಎಲ್ಲೆಲ್ಲಿ ನಿರ್ಮಾಣಕ್ಕೆ ಅಸ್ತು?

ನಾಯಕನಹಟ್ಟಿ ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಾಗನೂರಹಟ್ಟಿಯ 1ನೇ ವಾರ್ಡ್‌ 5ನೇ ವಾರ್ಡ್‌ನ ಪೊಲೀಸ್‌ ವಸತಿ ಸಮುಚ್ಚಯದ ಬಳಿ 7ನೇ ವಾರ್ಡ್‌ನ ಶಾದಿಮಹಲ್‌ ಆವರಣ 14ನೇ ವಾರ್ಡ್‌ನ ಮಲ್ಲೂರಹಳ್ಳಿ ರಸ್ತೆ ಮತ್ತು ಬೋಸೆದೇವರಹಟ್ಟಿ ಗ್ರಾಮದ ಶಾಲೆಯ ಬಳಿ ಸ್ಥಳ ನಿಗದಿಪಡಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಈ ಐದೂ ಘಟಕಗಳ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭವಾಗಿತ್ತು. ಅದರಂತೆ 12 ಅಡಿ ಉದ್ದ 15 ಅಡಿ ಅಗಲದ ಬುನಾದಿಯನ್ನು ನಿರ್ಮಿಸಿ ಅದರ ಮೇಲೆ ರೆಡಿಮೇಡ್ ವಾಲ್‌ಗಳನ್ನು ನಿರ್ಮಿಸಿದ್ದರು. ಆದರೆ ಯಾವುದೇ ಮುನ್ಸೂಚನೆ ನೀಡದೆ ಮುಂದಿನ ಹಂತದ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಅವು ನನೆಗದಿಗೆ ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.