ADVERTISEMENT

ನಾಯಕನಹಟ್ಟಿ: ವೈಭವದಿಂದ ಜರುಗಿದ ತಿಪ್ಪೇರುದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 15:41 IST
Last Updated 20 ಮಾರ್ಚ್ 2022, 15:41 IST
ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಧಾವಿಸಿದ ಸಾವಿರಾರು ಭಕ್ತರು.
ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಧಾವಿಸಿದ ಸಾವಿರಾರು ಭಕ್ತರು.   

ನಾಯಕನಹಟ್ಟಿ (ಚಿತ್ರದುರ್ಗ): ಇಲ್ಲಿನ ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಮಹಾರಥೋತ್ಸವದಲ್ಲಿ ವಿರಾಜಮಾನಗೊಂಡ ತಿಪ್ಪೇರುದ್ರಸ್ವಾಮಿಯನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು.

ಮಧ್ಯ ಕರ್ನಾಟಕದ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ರಥೋತ್ಸವ ರಾಜ್ಯದ ಗಮನ ಸೆಳೆದಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ದೇಶದ ಹಲವೆಡೆಯಿಂದ ಭಕ್ತರು ಪಾಲ್ಗೊಂಡಿದ್ದರು. ಎರಡು ವರ್ಷ ಕೊರೊನಾ ಸೋಂಕಿನ ಕಾರಣಕ್ಕೆ ಹಲವು ನಿರ್ಬಂಧಗಳಿದ್ದವು. ಈ ವರ್ಷ ಕೋವಿಡ್‌ ಆತಂಕ ಕಡಿಮೆಯಾಗಿರುವುದರಿಂದ ಭಕ್ತರ ದಂಡು ಹರಿದುಬಂದಿತ್ತು.

ರಥೋತ್ಸವಕ್ಕೆ ಮಧ್ಯಾಹ್ನ 2 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯಲ್ಲಿ ವಿರಾಜಮಾನವಾಗಿದ್ದ ತಿಪ್ಪೇರುದ್ರಸ್ವಾಮಿಯ ವಿಗ್ರಹವನ್ನು ರಥದತ್ತ ಕೊಂಡೊಯ್ಯಲಾಯಿತು. ಮುಕ್ತಿ ಭಾವುಟ ಹರಾಜು ಪ್ರಕ್ರಿಯೆ ಮುಕ್ತವಾಯವಾದ ಬಳಿಕ ರಥ ಮುಂದಡಿ ಇಟ್ಟಿತು. ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸಾಕ್ಷಿಯಾದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.