ADVERTISEMENT

ಚಿತ್ರದುರ್ಗ: 112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಫಾರಸು

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:35 IST
Last Updated 9 ಅಕ್ಟೋಬರ್ 2025, 6:35 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆ ನಡೆಸಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆ ನಡೆಸಿದರು   

ಚಿತ್ರದುರ್ಗ: ‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 112 ಹೊಸ ಮತಗಟ್ಟೆ ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಇದರಿಂದ ಮತಗಟ್ಟೆಗಳ ಸಂಖ್ಯೆ 1,661ರಿಂದ 1,773ಕ್ಕೆ ಏರಿಕೆಯಾಗಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗದ ಸುತ್ತೋಲೆಯಂತೆ 1,200ಕ್ಕೂ ಹೆಚ್ಚು ಮತದಾರರು ಇರುವ 107 ಮತಗಟ್ಟೆ ಹಾಗೂ 2 ಕಿ.ಮೀ.ಗಿಂತ ಹೆಚ್ಚಿನ ಅಂತರ ಇರುವ 5 ಹಳ್ಳಿಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಪಟ್ಟಿ ಸಿದ್ದಪಡಿಸಲಾಗಿದೆ’ ಎಂದರು.

‘ಈ ವಿಚಾರವಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮೊಳಕಾಲ್ಮೂರು 23, ಚಳ್ಳಕೆರೆ21, ಚಿತ್ರದುರ್ಗ 20, ಹಿರಿಯೂರು13, ಹೊಸದುರ್ಗ18 ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 17 ಹೊಸ ಮತಗಟ್ಟೆ ಸ್ಥಾಪನೆಯಾಗಲಿವೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಅಂಕಿ ಅಂಶ ಸಿದ್ದಪಡಿಸಲಾಗಿದೆ. ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವೇಳೆ ಮತಗಟ್ಟೆ ಅಧಿಕಾರಿಗಳು, ಪ್ರತಿ ಮನೆಗಳಿಗೂ ಭೇಟಿ ನೀಡಿ 18 ವರ್ಷದ ಮೇಲ್ಪಟ್ಟವರ ವಿವರ ಸಂಗ್ರಹಿಸಲಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳು ಸಹ ಬೂತ್‌ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.

‘ವಿಧಾನ ಪರಿಷತ್‌ನ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದೆ. ನಮೂನೆ-18 ರಲ್ಲಿ ಹೆಸರು ಸೇರ್ಪಡೆಗೆ ನ.6 ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಉಪವಿಭಾಗಾಧಿಕಾರಿ ಮೆಹಬೂಬ್‌ ಜಿಲಾನಿ ಖುರೇಷಿ, ತಹಶೀಲ್ದಾರ್‌ ನಾಗವೇಣಿ, ಶಿರಸ್ತೇದಾರ್‌ ಮಲ್ಲಿಕಾರ್ಜುನ ನಾಯಕ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎನ್‌.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ. ನಾಸೀರುದ್ದೀನ್‌, ಜೆಡಿಎಸ್‌ ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ಯಶವಂತ್‌ ಕುಮಾರ್‌, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ.ಪರುಶುರಾಮ್ ಇದ್ದರು.

ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದೆ. ಇತರೆ ರಾಜ್ಯಗಳಲ್ಲಿಯೂ ಪರಿಷ್ಕರಣೆ ವಿಸ್ತರಿಸಲಾಗಿದ್ದು ಶೀಘ್ರದಲ್ಲೇ ರಾಜ್ಯದಲ್ಲಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟವಾಗಲಿದೆ.
-ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.