ಚಿಕ್ಕಜಾಜೂರು: ಹೋಬಳಿಯಲ್ಲಿ ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ರಾತ್ರಿಯೂ ಮುಂದುವರಿದಿದ್ದರಿಂದ ಚಿಕ್ಕಜಾಜೂರು ಸಮೀಪದ ಗೌರಿಪುರ ಗ್ರಾಮದೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಹಳ್ಳ ಕೊಳ್ಳಗಳು ಮೈದುಂಬಿ ಹರಿದು, ಕೆರೆಗಳಿಗೆ ನೀರು ಹರಿದಿದೆ.
ಬಿ. ದುರ್ಗ ಹೋಬಳಿಯಾದ್ಯಂತ ಹದ ಮಳೆಯಾಗಿದೆ. ಚಿಕ್ಕಜಾಜೂರು ಸುತ್ತಮುತ್ತಲಿನ ಅನೇಕ ಕಡೆಗಳಲ್ಲಿ ರಾತ್ರಿ ಉತ್ತಮ ಮಳೆಯಾಗಿದ್ದು, ತೋಟದ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಚಿಕ್ಕಜಾಜೂರಿನಲ್ಲಿ 21.4 ಮಿ.ಮೀ. ಹಾಗೂ ಬಿ. ದುರ್ಗದಲ್ಲಿ 36 ಮಿ.ಮೀ.ನಷ್ಟು ಮಳೆಯಾಗಿದೆ.
ದ್ವೀಪದಂತಾದ ಗ್ರಾಮ: ಬುಧವಾರ ಮಧ್ಯಾಹ್ನದಿಂದಲೇ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಮಳೆ ಆರಂಭವಾಗಿ ನಂತರಬಿರುಸಿನ ಮಳೆಯಾಗಿದೆ. ಸಮೀಪದ ಗೌರಿಪುರ, ಕೊಂಡಾಪುರ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಕಳೆದ ಬಾರಿಯೂ ಇದೇ ಸಮಸ್ಯೆ ಉಂಟಾದಾಗ ಚರಂಡಿಗಳನ್ನು ನಿರ್ಮಿಸಿಕೊಡುವ ಭರವಸೆಯನ್ನು ಧಿಕಾರಿಗಳು ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂಕಷ್ಟ ಮುಂದುವರಿದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ತುಂಬಿ ಹರಿದ ಹಳ್ಳಗಳು: ಭಾರಿ ಮಳೆಗೆ ಕೊಂಡಾಪುರ ಹಾಗೂ ಗೌರಿಪುರದಿಂದ ಹರಿದು ಬರುವ ಹೊಂಗೆ ಹಳ್ಳ ಮತ್ತು ಟಿ. ನುಲೇನೂರು, ತೊಡರನಾಳ್, ಲಿಂಗದಹಳ್ಳಿಗಳ ಸಮೀಪ ಹರಿಯುವ ದೊಡ್ಡ ಹಳ್ಳ ಮೈದುಂಬಿ ಹರಿಯುತ್ತಿದೆ. ಈ ಎರಡೂ ಹಳ್ಳಗಳು ಭೀಮಸಮುದ್ರದ ಕೆರೆಗೆ ಹರಿಯುತ್ತಿದ್ದುದನ್ನು ಯುವಕರು ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.