ADVERTISEMENT

ಮೇವು ಬ್ಯಾಂಕ್ ಬೇಡ, ಗೋಶಾಲೆ ಬೇಕು: ಜಾನುವಾರಿನೊಂದಿಗೆ ನಾಡಕಚೇರಿಗೆ ಮುತ್ತಿಗೆ

ಮುತ್ತಿಗೆ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 13 ಮೇ 2019, 14:21 IST
Last Updated 13 ಮೇ 2019, 14:21 IST
ತುರುವನೂರು ಗ್ರಾಮದಲ್ಲಿ ಸೋಮವಾರ ಗೋಶಾಲೆ ಸ್ಥಾಪಿಸುವಂತೆ ಒತ್ತಾಯಿಸಿ ರೈತರು ಜಾನುವಾರಿನೊಂದಿಗೆ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ತುರುವನೂರು ಗ್ರಾಮದಲ್ಲಿ ಸೋಮವಾರ ಗೋಶಾಲೆ ಸ್ಥಾಪಿಸುವಂತೆ ಒತ್ತಾಯಿಸಿ ರೈತರು ಜಾನುವಾರಿನೊಂದಿಗೆ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ತುರುವನೂರು: ಗೋಶಾಲೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರೈತರು ತಮ್ಮ ಜಾನುವಾರಿನೊಂದಿಗೆ ತುರುವನೂರು ನಾಡಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಾನುವಾರಿಗೆ ಮೇವು ಪೂರೈಸಲಾಗದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗೋಶಾಲೆ ಸ್ಥಾಪಿಸಿ ಜಾನುವಾರಿಗೆ ಮೇವು, ನೀರು ಪೂರೈಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಜಾನುವಾರು ಸಮೇತ ನಾಡಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.

‘ರಾಸುಗಳು ಮೇವು, ನೀರು ಇಲ್ಲದೆ ನಿತ್ರಾಣಗೊಂಡಿವೆ. ಗೋಶಾಲೆ ಪ್ರಾರಂಭ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದರೂ ಇನ್ನೂ ಆರಂಭವಾಗಿಲ್ಲ. ಮೇವು ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಆದರೆ ಇದುವರೆಗೂ ಮೇವು ವಿತರಣೆ ಮಾಡಿಲ್ಲ’ ಎಂದು ರೈತ ಸುನೀಲ್ ಆರೋಪಿಸಿದರು

ADVERTISEMENT

‘ಮೇವು ಬ್ಯಾಂಕ್‌ನಿಂದ ಮೇವು ಖರೀದಿಸಲು ನಮ್ಮ ಬಳಿ ಹಣವಿಲ್ಲ. ಹಾಗಾಗಿ ಮೇವು ಬ್ಯಾಂಕ್ ಸ್ಥಾಪನೆಗಿಂತ ಗೋಶಾಲೆ ಆರಂಭವಾದರೆ ಜಾನುವಾರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

‘ಐದಾರು ವರ್ಷಗಳಿಂದ ಮಳೆ ಇಲ್ಲದೆ ಕಷ್ಟದಿಂದ ಜೀವನ ಮಾಡುತ್ತಿದ್ದೇವೆ. ಮೇವು ಬ್ಯಾಂಕ್‌ನಿಂದ ಮೇವು ಖರೀದಿಸಲು ಬಿಡಿಗಾಸು ಇಲ್ಲ. ಹಾಗಾಗಿ ಶೀಘ್ರವಾಗಿ ಗೋಶಾಲೆ ತೆರೆದು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು’ ಎನ್ನುತ್ತಾರೆ ರೈತ ಗೋಪಿ.

‘ಜಿಲ್ಲಾಡಳಿತದಿಂದ ಈಗಾಗಲೇ ತುರುವನೂರು ಗ್ರಾಮದಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಆದರೆ ಯಾವ ರೈತರೂ ಮೇವು ಬ್ಯಾಂಕ್‌ನಿಂದ ಮೇವು ಖರೀದಿಸಲು ಮುಂದಾಗಿಲ್ಲ’ ಎಂದು ನಾಡಕಚೇರಿ ಅಧಿಕಾರಿಗಳು ಹೇಳಿದರು.

ರಾಜಣ್ಣ, ಗೋಪಾಲಪ್ಪ, ಗಂಗಾಧರ್, ಹನುಮಂತರೆಡ್ಡಿ ಸೇರಿ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.