ADVERTISEMENT

ಸಹಜ ಸ್ಥಿತಿಗೆ ಮರಳಿದ ಕೋಟೆನಾಡು

ವಾಣಿಜ್ಯ ವಹಿವಾಟು ಆರಂಭ, ಮಾರುಕಟ್ಟೆಯಲ್ಲಿ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 12:35 IST
Last Updated 4 ಮೇ 2020, 12:35 IST
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ಸೋಮವಾರ ಕಂಡುಬಂದ ಜನ ಮತ್ತು ವಾಹನ ದಟ್ಟಣೆ
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ಸೋಮವಾರ ಕಂಡುಬಂದ ಜನ ಮತ್ತು ವಾಹನ ದಟ್ಟಣೆ   

ಚಿತ್ರದುರ್ಗ: ಲಾಕ್‌ಡೌನ್‌ ಕಾರಣಕ್ಕೆ ಒಂದೂವರೆ ತಿಂಗಳಿಂದ ನಿಷೇಧಾಜ್ಞೆ ರೀತಿಯಲ್ಲಿದ್ದ ಜಿಲ್ಲೆ ಸೋಮವಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಎಲ್ಲ ಬಗೆಯ ವಾಣಿಜ್ಯ ವಹಿವಾಟು ಆರಂಭವಾಗಿದ್ದು, ಅಂಗಡಿಗಳು ಬಾಗಿಲು ತೆರೆದಿವೆ. ಮಾರುಕಟ್ಟೆಯಲ್ಲಿ ಜನ ದಟ್ಟಣೆ ಹೆಚ್ಚಾಗಿದೆ.

ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಹಸಿರು ವಲಯದಲ್ಲಿರುವ ಚಿತ್ರದುರ್ಗಕ್ಕೆ ಹೆಚ್ಚು ಅವಕಾಶಗಳು ಸಿಕ್ಕಿವೆ. ಮದ್ಯದಂಗಡಿ ಕೂಡ ಬಾಗಿಲು ತೆರೆದಿವೆ. ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಕಾರ್ಯಾರಂಭಗೊಂಡಿವೆ. ಸಾರಿಗೆ ಸಂಚಾರ ಶುರುವಾಗಿದೆ. ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ಹೆಚ್ಚಳವಾಗಿದೆ.

ಇಷ್ಟು ದಿನ ಮನೆಗೆ ಸೀಮಿತವಾಗಿದ್ದ ಜನರು ಸ್ವತಂತ್ರವಾಗಿ ಸಂಚರಿಸಲಾರಂಭಿಸಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಮನೆಯಿಂದ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಮಾತ್ರ ಮಾರುಕಟ್ಟೆಗೆ ಬಂದು ಬಳಿಕ ಮನೆ ಸೇರಿಕೊಳ್ಳುವ ದಿನಚರಿ ರೂಢಿಸಿಕೊಂಡಿದ್ದ ನಾಗರಿಕರು ಎಲ್ಲ ಸಮಯದಲ್ಲಿ ನಿರಾತಂಕವಾಗಿ ಓಡಾಡುತ್ತಿದ್ದಾರೆ. ಅಲ್ಲಲ್ಲಿ ಲಾಠಿ ಹಿಡಿದು ಪ್ರಶ್ನಿಸುತ್ತಿದ್ದ ಪೊಲೀಸರು ಅಪರೂಪಕ್ಕೆ ಕಾಣಿಸುತ್ತಿದ್ದಾರೆ. ಹೊರಗೆ ಸಂಚರಿಸುವ ಕೆಲವರು ಮುಖಗವಸು ಹಾಕುತ್ತಿದ್ದಾರೆ.

ADVERTISEMENT

ಕುಗ್ಗಿತೇ ಕೊರೊನಾ ಭೀತಿ?

ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಜನಸಂಚಾರ ಹಾಗೂ ವಾಣಿಜ್ಯ ವಹಿವಾಟಿಗೆ ಅವಕಾಶವಿದೆ. ಆದರೆ, ನಸುಕಿನ 5.30ರಿಂದಲೇ ಜನರು ಹೊರಗೆ ಕಾಣಿಸಿಕೊಂಡರು. ಸೂರ್ಯ ಉದಯಿಸುವುದಕ್ಕೂ ಮೊದಲೇ ವಾಯು ವಿಹಾರಕ್ಕೆ ತೆರಳಿದ್ದರು. ಉದ್ಯಾನ, ಕೋಟೆ ಸಮೀಪದ ರಸ್ತೆ, ಹೊಳಲ್ಕೆರೆ ರಸ್ತೆ, ತುರುವನೂರು ರಸ್ತೆ, ಮೈದಾನ ಹಾಗೂ ನಗರದ ಹೊರವಲಯದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ವಾಹನ ಸಂಚಾರವೂ ಅಧಿಕವಾಗಿತ್ತು.

ಹಳೆ ಮಾಧ್ಯಮಿಕ ಶಾಲಾ ಮೈದಾನ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರಿದ್ದರು. ಹೋಟೆಲು ಬಾಗಿಲು ತೆರೆಯಲು ಅವಕಾಶ ಕಲ್ಪಿಸಿದ ಹಾಗೂ ಶುಭ ಸಮಾರಂಭಗಳಿಗೂ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಗ್ರಾಹಕರಿಂದ ತುಂಬಿ ತುಳುಕಿತು.

ಕೊರೊನಾ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದ್ದರೂ, ಸೋಂಕಿನ ಬಗೆಗೆ ಜನರಲ್ಲಿ ತಿಂಗಳ ಹಿಂದೆ ಇದ್ದ ಭೀತಿ ಈಗಿಲ್ಲ. ಸೋಂಕು ತಡೆಯಲು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಲ್ಲಲ್ಲಿ ಗುಂಪು ಸೇರುವುದು, ಹರಟುವುದು ಸಾಮಾನ್ಯವಾಗಿತ್ತು.

ಅಂತರ ಮರೆತ ಜನರು

ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಮಾರುಕಟ್ಟೆಯತ್ತ ಗ್ರಾಹಕರು ಧಾವಿಸಿದರು. ದ್ವಿಚಕ್ರ ವಾಹನ, ಕಾರು, ಆಟೊಗಳಲ್ಲಿ ಮಾರುಕಟ್ಟೆಗೆ ಬಂದಿಳಿದರು. ಅಂಗಡಿಗಳು ಬಾಗಿಲು ತೆರೆಯುವ ಮೊದಲೇ ಗ್ರಾಮೀಣ ಪ್ರದೇಶದ ಗ್ರಾಹಕರು ಖರೀದಿಗೆ ಮುಂದಾಗಿದ್ದರು. ಇದೇ ಮೊದಲ ಬಾರಿಗೆ ಬಟ್ಟೆ ಅಂಗಡಿ, ಸೆಲೂನ್‌ ಶಾಪ್‌, ವಾಹನ ಷೋರೂಂ, ಜ್ಯುವೆಲರಿ ಮಳಿಗೆ ತೆರೆದಿದ್ದರಿಂದ ಮಾರುಕಟ್ಟೆಯಲ್ಲಿ ಹೆಚ್ಚು ಜನ ಕಂಡುಬಂದರು. ಸಂತೆ ಹೊಂಡದ ರಸ್ತೆ, ಮೆದೇಹಳ್ಳಿ ರಸ್ತೆ, ಲಕ್ಷ್ಮಿ ಬಜಾರ್‌, ಬಿ.ಡಿ.ರಸ್ತೆಯ ಬಹುತೇಕ ಎಲ್ಲ ಮಳಿಗೆಯಲ್ಲಿ ದಿನವಿಡೀ ಗ್ರಾಹಕರಿದ್ದರು.

ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರು ಅಂತರ ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಬೆರಳೆಣಿಕೆಯ ಅಂಗಡಿ ಹೊರತುಪಡಿಸಿ ಉಳಿದೆಡೆ ಅಂತರ ಕಾಯ್ದುಕೊಳ್ಳಲಿಲ್ಲ. ಅಂಗಡಿಗಳಲ್ಲಿ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ಬಳಕೆಯೂ ಅಪರೂಪವಾಗಿತ್ತು. ಗ್ರಾಹಕರು ಅಂಗಡಿಗಳನ್ನು ಪ್ರವೇಶಿಸುವುದಕ್ಕೂ ನಿರ್ಬಂಧವಿದೆ. ಆದರೆ, ಬಹುತೇಕ ಮಳಿಗೆಯಲ್ಲಿ ಎಲ್ಲರಿಗೂ ಪ್ರವೇಶ ಕಲ್ಪಿಸಲಾಗಿತ್ತು.

ಹೋಟೆಲು ಬಾಗಿಲು ತೆರೆದರೂ ಪಾರ್ಸ್‌ಲ್‌ಗೆ ಮಾತ್ರ ಅವಕಾಶವಿತ್ತು. ಎಲೆಕ್ಟ್ರಾನಿಕ್‌ ಉಪಕರಣ, ಸ್ಟೇಷನರಿ ಅಂಗಡಿ, ದಿನಸಿ, ತರಕಾರಿ ಹಾಗೂ ಹಣ್ಣು ಮಾರಾಟ ನಿರಾತಂಕವಾಗಿ ನಡೆಯಿತು. ಮಾರುಕಟ್ಟೆ ಪ್ರದೇಶದ ಅಲ್ಲಲ್ಲಿ ಪೊಲೀಸರು ಇದ್ದರು. ಜಿಲ್ಲಾಧಿಕಾರಿ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಸ್‌ ನಿಲ್ದಾಣ ಸೇರಿ ಹಲವೆಡೆ ಹೆಚ್ಚು ಸಾರ್ವಜನಿಕರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.