
ಚಿತ್ರದುರ್ಗ: ‘ಸಾಧನೆ ಮಾಡಿದವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಅವರನ್ನು ಜಾತ್ಯತೀತವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ನಗರದ ಬಂಜಾರ ಭವನದಲ್ಲಿ ಸೋಮವಾರ ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕ್ರಾಂತಿ ಸೇನೆಯಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಾಧಕರ ಸಾಧನೆ, ತ್ಯಾಗ, ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಆಗ ಮಾತ್ರ ಅವರನ್ನು ನಿಜವಾದ ಅರ್ಥದಲ್ಲಿ ಸ್ಮರಿಸಿದಂತಾಗುತ್ತದೆ’ ಎಂದರು.
‘ಕೋಟೆ ರಕ್ಷಣೆಗೆಗಾಗಿ ಶತ್ರುಗಳನ್ನು ಸದೆ ಬಡಿದ ವೀರ ವನಿತೆ ಓಬವ್ವಳನ್ನು ಒಂದು ಜಾತಿ, ಜನಾಂಗಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಆಕೆ ಆ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಕೋಟೆ ಉಳಿಯಿತು. ಇಂತಹ ಮಹಾನ್ ನಾಯಕಿಯ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕಿದೆ’ ಎಂದು ತಿಳಿಸಿದರು.
‘ಸಾಧಕರ ಸಾಧನೆಯನ್ನು ನೋಡಬೇಕೆ ಹೊರತು ಜಾತಿ, ಧರ್ಮ, ಜನಾಂಗವನ್ನು ನೋಡಬಾರದು. ಓಬವ್ವ ಛಲವಾದಿ ಸಮುದಾಯಕ್ಕೆ ಸೇರಿದ್ದರೂ ಆಕೆ ಮಾಡಿದ ಸಾಧನೆಯನ್ನು ಎಲ್ಲರು ಕೊಂಡಾಡಬೇಕಿದೆ’ ಎಂದರು.
‘ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಹೆಚ್ಚುತ್ತಿವೆ. ಇವುಗಳನ್ನು ಎದುರಿಸುವ ಮನೋಭಾವವನ್ನು ಒನಕೆ ಓಬವ್ವಳ ರೀತಿಯಲ್ಲಿ ಬೆಳೆಸಿಕೊಳ್ಳಬೇಕಿದೆ. ಓಬವ್ವ ಕಷ್ಟದ ಸಮಯದಲ್ಲಿ ಯಾವ ರೀತಿಯಲ್ಲಿ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಂಡಳೋ ಅದೇ ರೀತಿಯಲ್ಲಿ ನಿಮ್ಮ ಕಷ್ಟದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು’ ಎಂದು ಕರ್ನಾಟಕ ಕ್ರಾಂತಿ ಸೇನೆಯ ಮತ್ತು ಬಂಜಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ತುಳಸಿ ರಮೇಶ್, ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದುರ್ಗ, ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.