ADVERTISEMENT

ಹಿರಿಯೂರು | ಈರುಳ್ಳಿ ಬೆಳೆ: ಸೂಕ್ತ ತಳಿ ಆಯ್ಕೆ ಮಾಡಲು ಸಲಹೆ

ಸುಧಾರಿತ ಈರುಳ್ಳಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:57 IST
Last Updated 4 ಜುಲೈ 2025, 13:57 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಕಾಶ್ ಕೆರೂರೆ ಅವರು ರೈತರನ್ನು ತಾಕಿಗೆ ಕರೆದೊಯ್ದು ಪ್ರಾತ್ಯಕ್ಷಿಕೆ ತೋರಿಸಿದರು
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಕಾಶ್ ಕೆರೂರೆ ಅವರು ರೈತರನ್ನು ತಾಕಿಗೆ ಕರೆದೊಯ್ದು ಪ್ರಾತ್ಯಕ್ಷಿಕೆ ತೋರಿಸಿದರು   

ಹಿರಿಯೂರು: ‘ಈರುಳ್ಳಿ ಬೆಳೆಗಾರರು ಮಣ್ಣು ಮಾದರಿ ಆಧಾರಿತ ಪೋಷಕಾಂಶಗಳ ನಿರ್ವಹಣೆ, ಸೂಕ್ತ ತಳಿಯ ಆಯ್ಕೆ ಹಾಗೂ ಹೆಚ್ಚಿನ ಸಾವಯವ ಗೊಬ್ಬರ ಬಳಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬೇಕು’ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್. ರಜನೀಕಾಂತ್ ಸೂಚಿಸಿದರು.

ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಜಿಲ್ಲೆಯ ರೈತರಿಗೆ ಸುಧಾರಿತ ಈರುಳ್ಳಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಈರುಳ್ಳಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ತರಕಾರಿ ಬೆಳೆಯಾಗಿದ್ದು, ಈ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಬೇಸಾಯ ಕ್ರಮ, ಕೀಟ ಮತ್ತು ರೋಗ ನಿರ್ವಹಣೆ ಕುರಿತ ತಾಂತ್ರಿಕ ಮಾಹಿತಿ ಪಡೆದುಕೊಂಡು ಹೆಚ್ಚುದಿನ ಉಳಿಯಬಲ್ಲ, ಅಧಿಕ ಇಳುವರಿ ಕೊಡುವ ತಳಿಯನ್ನು ಬಿತ್ತನೆ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಈರುಳ್ಳಿ ಬೆಳೆ ಬಿತ್ತನೆಗೆ ಜೂನ್ ಮತ್ತು ಜುಲೈ ತಿಂಗಳು ಸೂಕ್ತವಾಗಿದ್ದು, ವಿವಿಧ ತಳಿಗಳು, ರಸಗೊಬ್ಬರದ ಪ್ರಮಾಣ, ಬಿತ್ತನೆ ಬೀಜ ಬಳಸುವ ಪ್ರಮಾಣ, ಬೀಜೋಪಚಾರದ ಪ್ರಾಮುಖ್ಯ, ಬೆಳೆಯಲ್ಲಿ ಸಸಿ ಮಡಿ ಮಾಡುವ ವಿಧಾನ, ಕಳೆ ನಿರ್ವಹಣೆ ಮತ್ತು ನೀರು ನಿರ್ವಹಣೆ ಕುರಿತು ತೋಟಗಾರಿಕೆ ಮಹಾವಿದ್ಯಾಲಯದ ತರಕಾರಿ ವಿಭಾಗದ ಸಹ ಪ್ರಾಧ್ಯಪಕ ಪ್ರಕಾಶ್ ಕೆರೂರೆ ರೈತರನ್ನು ತಾಕಿಗೆ ಕರೆದೊಯ್ದು ಪ್ರಾತ್ಯಕ್ಷಿಕೆ ತೋರಿಸಿದರು.

ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಶರಣಪ್ಪ ಜಂಗಂಡಿ, ಹೊಸದಾಗಿ ತಯಾರಿಸಿರುವ ಈರುಳ್ಳಿ ಮೇಲಿನ ಜುಟ್ಟು ಕತ್ತರಿಸುವ ಯಂತ್ರದ ಕುರಿತು ಮಾಹಿತಿ ನೀಡಿದರು. ಕೀಟಶಾಸ್ತ್ರಜ್ಞ ಟಿ. ರುದ್ರಮುನಿ, ಈರುಳ್ಳಿ ಬೆಳೆಯಲ್ಲಿ ಬರುವ ಪ್ರಮುಖ ಕೀಟಗಳಾದ ಥ್ರಿಪ್ಸ್, ನುಸಿ, ತಂಬಾಕಿನ ಹುಳು ಹಾಗೂ ಪ್ರಮುಖ ರೋಗಗಳಾದ ನೇರಳೆ ಮಚ್ಚೆ ರೋಗ, ದುಂಡಾಣು ಗೆಡ್ಡೆಕೊಳೆ ರೋಗಗಳ ಸಮಗ್ರ ನಿರ್ವಹಣೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.