ADVERTISEMENT

ರೋಗ ಗೆಡ್ಡೆಯನ್ನೆಲ್ಲ ಕೊಳೆಸಿತು: ಕಣ್ಣೀರು ಸುರಿಸಿದ ಈರುಳ್ಳಿ ಬೆಳೆಗಾರರು

ಜಿ.ಪಂ ಅಧ್ಯಕ್ಷೆ ಎದುರು ಕಣ್ಣೀರು ಸುರಿಸಿದ ಈರುಳ್ಳಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:40 IST
Last Updated 25 ಸೆಪ್ಟೆಂಬರ್ 2020, 1:40 IST
ಹಿರಿಯೂರು ತಾಲ್ಲೂಕಿನ ಎಂ.ಡಿ.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಈರುಳ್ಳಿ ಬೆಳೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಗುರುವಾರ ಪರಿಶೀಲಿಸಿದರು
ಹಿರಿಯೂರು ತಾಲ್ಲೂಕಿನ ಎಂ.ಡಿ.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಈರುಳ್ಳಿ ಬೆಳೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಗುರುವಾರ ಪರಿಶೀಲಿಸಿದರು   

ಹಿರಿಯೂರು: ‘ಒಂದ್ ಎಕರೆ ಈರುಳ್ಳಿ ಕೊಯ್ಲು ಮಾಡಿ ಚೀಲಕ್ಕೆ ತುಂಬಲು ಏನಿಲ್ಲವೆಂದರೂ ₹ 40 ಸಾವಿರದಿಂದ ₹ 45 ಸಾವಿರ ಖರ್ಚು ಬರುತ್ತದೆ. ಈ ಬಾರಿ ಈರುಳ್ಳಿಗೆ ಉತ್ತಮ ಬೆಲೆ ಇದೆ. ಕೈಗೆ ಒಂದಷ್ಟು ಕಾಸು ಬರುತ್ತದೆ ಎಂದುಕೊಂಡಿದ್ದೆವು. ಆದರೆ, ರೋಗ ನಮ್ಮ ಗೆಡ್ಡೆಯನ್ನೆಲ್ಲ ಕೊಳೆಸಿತು’.

ತಾಲ್ಲೂಕಿನ ಐಮಂಗಲ ಹೋಬಳಿಯ ಎಂ.ಡಿ. ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಗುರುವಾರ ಭೇಟಿ ನೀಡಿದಾಗ ಈರುಳ್ಳಿ ಬೆಳೆಗಾರರು ಹೀಗೆ ಸಮಸ್ಯೆ ಹೇಳಿಕೊಂಡು ಕಣ್ಣೀರಾದರು.

‘ರಂಗಪ್ಪ ಎಂಬುವವರು 20 ಎಕರೆಯಲ್ಲಿ ಬೆಳೆಸಿದ್ದ ಈರುಳ್ಳಿ ಕೊಳೆತ ಕಾರಣದಿಂದ ಅದರ ಮೇಲೆ ಟ್ರ್ಯಾಕ್ಟರ್‌ ಹರಿಸಿದ್ದಾರೆ. ಸರ್ಕಾರ ಕೈಹಿಡಿಯದಿದ್ದರೆ, ಈ ಭಾಗದ ರೈತರು ಉಳಿಯುವುದು ಕಷ್ಟ’ ಎಂದು ರೈತರಾದ ತಿಪ್ಪೇಸ್ವಾಮಿ, ಚಿದಾನಂದಪ್ಪ, ರಂಗಪ್ಪ ಅಳಲು ತೋಡಿಕೊಂಡರು.

ADVERTISEMENT

‘ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಈರುಳ್ಳಿ ಬೆಳೆ ಹೆಚ್ಚು ಹಾನಿಯಾಗಿದೆ. ತೋಟಗಾರಿಕೆ ಉಪ ನಿರ್ದೇಶಕರು ಈಗಾಗಲೇ ಬೆಳೆ ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ’ ಎಂದು ಶಶಿಕಲಾ ಸುರೇಶ್ ಬಾಬು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ, ಪಿಡಿಒ ಕೆಂಚಪ್ಪ, ಕಂದಿಕೆರೆ ಸುರೇಶ್ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.