ADVERTISEMENT

ಪಂಚಮಸಾಲಿ ಮೀಸಲಾತಿ: ಅ.1ಕ್ಕೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

ನಿಲುವು ಸ್ಪಷ್ಟಪಡಿಸಲು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 11:56 IST
Last Updated 28 ಸೆಪ್ಟೆಂಬರ್ 2021, 11:56 IST
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಮಂಗಳವಾರ ಏರ್ಪಡಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ ಕಾರ್ಯಕ್ರಮವನ್ನು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಅಖಿಲ ಭಾರತೀಯ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಮುಖಂಡರಾದ ಶಂಭು ಪಾಟೀಲ, ಡಾ.ಟಿ.ಎಸ್.ಪಾಟೀಲ, ಎಸ್‌ಎಂಎಲ್‌ ತಿಪ್ಪೇಸ್ವಾಮಿ ಇದ್ದಾರೆ.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಮಂಗಳವಾರ ಏರ್ಪಡಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ ಕಾರ್ಯಕ್ರಮವನ್ನು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಅಖಿಲ ಭಾರತೀಯ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಮುಖಂಡರಾದ ಶಂಭು ಪಾಟೀಲ, ಡಾ.ಟಿ.ಎಸ್.ಪಾಟೀಲ, ಎಸ್‌ಎಂಎಲ್‌ ತಿಪ್ಪೇಸ್ವಾಮಿ ಇದ್ದಾರೆ.   

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ತಳೆಯುವ ನಿಲುವನ್ನು ಅ.1ರ ಒಳಗೆ ಸ್ಪಷ್ಟಪಡಿಸಬೇಕು. ಇಲ್ಲವಾದರೆ ಮತ್ತೊಂದು ಸುತ್ತಿನ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಮಂಗಳವಾರ ಏರ್ಪಡಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ನಲ್ಲಿ ಸ್ವಾಮೀಜಿ ಮಾತನಾಡಿದರು.

‘ಸೆ.30ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡ ಸಮಾವೇಶಕ್ಕೆ ಸರ್ಕಾರ ಸಂದೇಶ ಕಳುಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಮೀಸಲಾತಿ ಸೌಲಭ್ಯ ಕಲ್ಪಿಸಿದರೆ ಅವರ ಭಾವಚಿತ್ರವನ್ನು ಮಠದಲ್ಲಿ ಹಾಕಿಕೊಳ್ಳುತ್ತೇವೆ. ಅವರಿಗೆ ಕಲ್ಲುಸಕ್ಕರೆಯ ತುಲಭಾರ ಮಾಡುತ್ತೇವೆ. ಇಲ್ಲವಾದರೆ, ಮಾರ್ಚ್‌ 15ರಂದು ಸ್ಥಗಿತಗೊಂಡ ಹೋರಾಟವನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

‘ಲಿಂಗಾಯತ ಸಮುದಾಯದ ಶ್ರೀಮಂತ ಒಳಪಂಗಡಗಳಿಗೆ 2ಎ ಮೀಸಲಾತಿ ಸಿಕ್ಕಿದೆ. ಇದೇ ಸೌಲಭ್ಯವನ್ನು ಪಂಚಮಸಾಲಿ ಸಮುದಾಯಕ್ಕೂ ವಿಸ್ತರಿಸಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕೆ ರಾಜ್ಯದ ಎಲ್ಲೆಡೆಯಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪಾದಯಾತ್ರೆ ಸಮುದಾಯವನ್ನು ಒಗ್ಗೂಡಿಸಿದೆ. ಸಮುದಾಯದ ಶಕ್ತಿ ವೃದ್ಧಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಒಳಪಂಗಡ ಶೇ 50ರಷ್ಟು ಜನಸಂಖ್ಯೆ ಹೊಂದಿದೆ. ಬೆಂಗಳೂರಿನಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಿದ ಮತ್ತೊಂದು ಒಳಪಂಗಡ ಸಿಗಲು ಸಾಧ್ಯವಿಲ್ಲ. ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಕ್ತಾಯವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸರ್ಕಾರ ತರಿಸಿಕೊಂಡು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ಅಖಿಲ ಭಾರತೀಯ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ‘39 ದಿನ ಪಾದಯಾತ್ರೆ ಹಾಗೂ 23 ದಿನ ಧರಣಿ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಲಿಂಗಾಯತ ಸಮುದಾಯದ ಇತರ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ನೀಡಿ ನಮಗೆ ವಂಚಿಸಿದ್ದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಇಂತಹ ಹೋರಾಟ ಇತಿಹಾಸದಲ್ಲಿ ನಡೆದಿಲ್ಲ’ ಎಂದು ಹೇಳಿದರು.

‘ಬಿ.ಎಸ್‌.ಯಡಿಯೂರಪ್ಪ ಅವರು ಮಾತುಕೊಟ್ಟು ಪಾಲನೆ ಮಾಡಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದೆ. ಅವರ ಕ್ಷೇತ್ರದಲ್ಲಿಯೂ ಪಂಚಮಸಾಲಿ ಸಮುದಾಯದ ಮತದಾರರು ಇದ್ದಾರೆ. ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದರೆ ಹೋರಾಟ ಮುಂದುವರಿಯುತ್ತದೆ’ ಎಂದರು.

ಮುರುಗೇಶ ನಿರಾಣಿಗೆ ಎಚ್ಚರಿಕೆ

ಸಮುದಾಯದಲ್ಲಿ ಗೊಂದಲ ಮೂಡಿಸುವಂತಹ ಹೇಳಿಕೆ ನೀಡುವುದನ್ನು ಸಚಿವ ಮುರುಗೇಶ ನಿರಾಣಿ ಕೈಬಿಡಬೇಕು. ಇಲ್ಲವಾದರೆ ಸರಿಯಾದ ಸಂದರ್ಭದಲ್ಲಿ ಪಾಠ ಕಲಿಸಲಾಗುವುದು ಎಂದು ಪಂಚಮಸಾಲಿ ಸಮುದಾಯದ ಮುಖಂಡ ಎಸ್‌ಎಂಎಲ್‌ ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.

‘ಸಮಜದ ಏಳಿಗೆ ಹಾಗೂ ಬಡ ಮಕ್ಕಳ ಶಿಕ್ಷಣದ ಉದ್ದೇಶಕ್ಕೆ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ನಾವು ಅವರನ್ನು ಬೆಂಬಲ ನೀಡಿದರೆ ಮಕ್ಕಳಿಗೆ ಅನುಕೂಲ ಆಗುತ್ತದೆ. ಈ ಹೋರಾಟಕ್ಕೆ ಶಕ್ತಿ ತುಂಬುವ ಅಗತ್ಯವಿದೆ. ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮತ್ತು ಅರವಿಂದ ಬೆಲ್ಲದ ಅವರು ಅಧಿವೇಶನದಲ್ಲಿ ಧರಣಿ ನಡೆಸಿದ್ದಾರೆ. ಮಂತ್ರಿಯಾಗಲು ಸಮುದಾಯವನ್ನು ಏಣಿಯಾಗಿ ಬಳಸಿಕೊಂಡ ಮುರುಗೇಶ ನಿರಾಣಿ ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮುಖಂಡರಾದ ಶಂಭು ಪಾಟೀಲ, ಜೀತೇಂದ್ರ ಇದ್ದರು.

***

ಈ ಹೋರಾಟಕ್ಕೆ ರಾಜಕೀಯ ಉದ್ದೇಶವಿಲ್ಲ. ಸಮುದಾಯ ಎಲ್ಲ ಶಾಸಕರು ಬಸವನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಕೈಜೋಡಿಸಬೇಕು. ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ.

ಡಾ.ಟಿ.ಎಸ್.ಪಾಟೀಲ, ಪಂಚಸೇನೆ ಅಧ್ಯಕ್ಷ

***

ರೈತ ಸಮುದಾಯ ಸಾಕಷ್ಟು ತೊಂದರೆಯಲ್ಲಿ ನರಳುತ್ತಿದೆ. ಸಮಾಜದ ನೋವಿಗೆ ಸ್ಪಂದಿಸಬೇಕಾದ ಅನೇಕ ಮಠಾಧೀಶರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಭಕ್ತರಿಗೆ ಯಾರೊಬ್ಬರು ನೆರವಾಗುತ್ತಿಲ್ಲ.

ಮಹಡಿ ಶಿವಮೂರ್ತಿ,ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.