ಚಿಕ್ಕಜಾಜೂರು: ಪುರುಷರಿಗೆ ಸರಿಸಮನಾಗಿ ಕೃಷಿಯಲ್ಲಿ ತೊಡಗಿಸಿಕೊಂಡ ರೈತ ಮಹಿಳೆ ಅನಿತಾ ಮಾದರಿ ಎನಿಸಿಕೊಂಡಿದ್ದಾರೆ. ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡು ಅಡಿಕೆಯೊಂದಿಗೆ ವಿವಿಧ ಅಂತರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.
ಚಿಕ್ಕಜಾಜೂರು ಸಮೀಪದ ಬಿ.ದುರ್ಗ ಗ್ರಾಮದ ಅನಿತಾ 4 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಎರಡು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ, ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿ ಅಡಿಕೆ ಸಸಿ ನಾಟಿ ಮಾಡಿದ್ದರು. ಅಂತರ ಬೆಳೆಯಾಗಿ ತರಕಾರಿ, ಹಣ್ಣು ಬೆಳೆದಿದ್ದಾರೆ.
ಅಂತರ ಬೆಳೆಯಾಗಿ ಪಪ್ಪಾಯ ಬೆಳೆದರೆ ಲಾಭ ಗಳಿಸಬಹುದು. ಇದಕ್ಕೆ ಸರ್ಕಾರದ ಆರ್ಥಿಕ ನೆರವೂ ಸಹ ಸಿಗುವುದೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಕುಮಾರ್ ಸಲಹೆ ನೀಡಿದ್ದರು. ಪತಿ ಮಾರುತಿ ಅವರೊಂದಿಗೆ ತೆರಳಿ ಬಬ್ಬೂರು ಫಾರಂನಿಂದ 2,400 ರೆಡ್ ಲೇಡಿ ತಳಿಯ ಪಪ್ಪಾಯ ಸಸಿ ತಂದು 2023 ಜೂನ್‌ನಲ್ಲಿ ನಾಟಿ ಮಾಡಿದ್ದರು.
‘ಸಸಿ, ತಳಗೊಬ್ಬರ, ಮೇಲುಗೊಬ್ಬರ, ಔಷಧ, ಕೂಲಿ, ಕಳೆ ಕೂಲಿ, ಬೇಸಾಯ ಸೇರಿ ಒಟ್ಟು ₹ 1.50 ಲಕ್ಷ ಖರ್ಚು ಮಾಡಿದ್ದೇವೆ. ಫೆಬ್ರುವರಿಯಲ್ಲಿ ಕಾಯಿ ಕಟಾವಿಗೆ ಬಂತು. ಏಪ್ರಿಲ್‌ವರೆಗೆ ಕೆ.ಜಿ.ಗೆ ₹ 8ರಂತೆ ಒಟ್ಟು 14 ಟನ್ ಕಾಯಿ ಮಾರಾಟ ಮಾಡಿದ್ದೇವೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದ್ದರಿಂದ ಈ ಎರಡು ತಿಂಗಳಲ್ಲಿ ಕೆ.ಜಿ.ಗೆ ₹ 14ರಂತೆ 10 ಟನ್ ಕಾಯಿ ಮಾರಾಟ ಮಾಡಲಾಯಿತು. ಇಲ್ಲಿಯವರೆಗೆ ₹ 3.20 ಲಕ್ಷ ಆದಾಯ ಪಡೆದಿದ್ದೇವೆ’ ಎಂದು ಅನಿತಾ ತಿಳಿಸಿದರು.
‘ತೋಟಗಾರಿಕಾ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಹಾಯ ಧನವಾಗಿ ₹ 1.20 ಲಕ್ಷ ಬಂದಿದೆ’ ಎಂದು ಅವರು ಹೇಳಿದರು.
ಅನಿತಾ ಅವರ ತೋಟದಲ್ಲಿ ಇಸ್ರೇಲ್ ಮಾದರಿಯ ಹನಿ ನೀರಾವರಿ ಅಳವಡಿಸಿರುವುದರಿಂದ ಎಲ್ಲ ಸಸಿಗಳಿಗೂ ಸಮ ಪ್ರಮಾಣದಲ್ಲಿ ನೀರು ಹರಿದಿದೆ. ಇದರಿಂದ ಉತ್ತಮ ಇಳುವರಿ ಬರಲು ಸಹಕಾರಿಯಾಗಿದೆ.-ಪಿ.ಬಿ.ಅಶ್ವಿನಿ ಸಹಾಯಕ ತೋಟಗಾರಿಕಾ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.