ADVERTISEMENT

ಪರಮೇಶ್ವರ್‌ಗೆ ಸಿ.ಎಂ. ಸ್ಥಾನ ನೀಡಲು ಒತ್ತಾಯ

ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:30 IST
Last Updated 13 ಡಿಸೆಂಬರ್ 2025, 5:30 IST
ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಕಾಂಗ್ರೆಸ್‌ ಹೈಕಮಾಂಡ್‌ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ನವ ಯುವಕರ ಗ್ರಾಮೀಣ ಸೇವಾ ಸಮಿತಿ, ಮಾದಿಗ ದಂಡೋರ ಸಮಿತಿ, ಮಾದಿಗ ಯುವ ಸೇನೆ ಸೇರಿದಂತೆ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ಒನಕೆ ಓಬವ್ವ ವೃತ್ತದವರೆಗೂ ಮೆರವಣಿಗೆ ನಡೆಸಿದರು.

ದಲಿತ ಸಮುದಾಯಗಳ ನಾಯಕರಾಗಿರುವ ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು, ದಲಿತರ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು. ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ADVERTISEMENT

ಸ್ವಾತಂತ್ರ್ಯ ಬಂದ ದಿನದಿಂದಲೂ ದಲಿತ ಸಮುದಾಯಗಳು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿವೆ. ರಾಜ್ಯದಲ್ಲಿ 1.10 ಕೋಟಿ ದಲಿತ ಸಮುದಾಯದ ಜನಸಂಖ್ಯೆ ಇದೆ. ಕಾಂಗ್ರೆಸ್‌ ಪಕ್ಷದಲ್ಲಿ ಸಮರ್ಥ ದಲಿತ ನಾಯಕರಿದ್ದರೂ ಇಲ್ಲಿಯವರೆಗೂ ಯಾರನ್ನೂ ಮುಖ್ಯಮಂತ್ರಿ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಎಂಬುದು ಕೇವಲ ಚರ್ಚೆಯ ವಿಷಯವಾಗಿದೆ. ಈಗಲಾದರೂ ವರಿಷ್ಠರು ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ ನಗರದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ 8 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಅಂದು ದಲಿತ ಸಮುದಾಯಗಳು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸಂಕಲ್ಪ ಮಾಡಿದ್ದವು. ಇದರಿಂದಾಗಿ ಕಾಂಗ್ರೆಸ್‌ 136 ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದರು.

ಪರಮೇಶ್ವರ್‌ ಅವರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. 2 ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸಿದ್ದಾರೆ. ಆದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿರುವುದು ನೋವಿನ ಸಂಗತಿಯಾಗಿದೆ. 2 ಬಾರಿಯೂ ಅವರಿಗೆ ಅನ್ಯಾಯವಾಗಿದೆ. ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಕಾಂಗ್ರೆಸ್‌ ವರಿಷ್ಠರು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈಗ ರಾಜ್ಯದಲ್ಲೆಡೆ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾವಣೆಯಾದರೆ ಆ ಸ್ಥಾನವನ್ನು ದಲಿತರಿಗೆ ನೀಡಬೇಕು. ಪಕ್ಷ ಸಂಘಟನೆಗೆ ಅಪಾರವಾಗಿ ಶ್ರಮಿಸಿರುವ ಪರಮೇಶ್ವರ್‌ ಈಗ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ ಪಕ್ಷದ ವಿರುದ್ಧ ದಲಿತರು ತಿರುಗಿ ಬೀಳುತ್ತಾರೆ. ಆ ಮೂಲಕ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಕೆಲಸಲಿದ್ದಾರೆ. ಕಾಂಗ್ರೆಸ್‌ ವರಿಷ್ಠರು ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಪರಮೇಶ್ವರ್‌ ಅವರನ್ನು ಈ ಬಾರಿ ಮುಖ್ಯಮಂತ್ರಿ ಮಾಡಿದರೆ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮತ್ತಷ್ಟು ಶಕ್ತಿ ಪಡೆಯಲಿದೆ. ಆ ಮೂಲಕ 2028ರಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ದೊಡ್ಡ ಇತಿಹಾಸ ನಿರ್ಮಾಣವಾಗಲಿದೆ. ಈಗಲೂ ಸಮುದಾಯಕ್ಕೆ ಸ್ಥಾನ ಸಿಗದಿದ್ದರೆ ನಾವು ಕಾಂಗ್ರೆಸ್‌ನಿಂದ ದೂರ ಸರಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ದ್ಯಾವರಹಳ್ಳಿ ಬಿ. ತಿಪ್ಪೇಸ್ವಾಮಿ, ಆರ್‌.ಮಲ್ಲಿಕಾರ್ಜುನ್‌, ಮುನಿಯಪ್ಪ, ಎಸ್‌.ಧರ್ಮಪತಿ, ರಾಜಶೇಖರ್‌ ಪ್ರತಿಭಟನೆಯಲ್ಲಿ ಇದ್ದರು.

ಪಿಂಚಣಿದಾರರಿಗೆ ನಿಗಮ–ಮಂಡಳಿ ಸ್ಥಾನ!

ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ. ಸರ್ಕಾರಿ ನೌಕರಿಯಲ್ಲಿ ಇದ್ದು ನಿವೃತ್ತರಾದವರಿಗೆ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವವವರಿಗೆ ಸ್ಥಾನ ನೀಡಲಾಗಿದೆ. ಇದರಿಂದ ನಿಜವಾದ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ಈ ತಪ್ಪು ಸರಿಪಡಿಸಬೇಕು. ನಿಜವಾದ ಕಾಂಗ್ರೆಸ್‌ ಮುಖಂಡರಿಗೆ ಸ್ಥಾನ ನೀಡಿ ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಕಾಂಗ್ರೆಸ್‌ ಪಕ್ಷಕ್ಕಾಗಿ ತನು ಮನವನ್ನು ಅರ್ಪಿಸಿ ಕೆಲಸ ಮಾಡಿದವರಿಗೆ ವರಿಷ್ಠರು ನಿಗಮ ಮಂಡಳಿ ಸ್ಥಾನ ನೀಡಬೇಕಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ವಿಷಯದಲ್ಲೂ ಕಾಂಗ್ರೆಸ್‌ ವರಿಷ್ಠರು ತಪ್ಪು ನಿರ್ಧಾರ ಕೈಗೊಂಡರು. ಇದರಿಂದಾಗಿ ಕಾಂಗ್ರೆಸ್‌ ಕ್ಷೇತ್ರಗಳು ಅನ್ಯಾಯವಾಗಿ ಬಿಜೆಪಿ ಪಾಲಾದವು. ಹೊರಗಿನವರಿಗೆ ಟಿಕೆಟ್‌ ನೀಡಿದ ಪರಿಣಾಮವಾಗಿ ಕ್ಷೇತ್ರ ಕೈಬಿಟ್ಟು ಹೋಯಿತು. ವರಿಷ್ಠರು ಈ ತಪ್ಪುಗಳನ್ನು ಸರಿಪಡಿಸದಿದ್ದರೆ ದಲಿತ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ತೊರೆಯಲಿದ್ದಾರೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.