ADVERTISEMENT

ಪರಶುರಾಂಪುರ: ಕೋನಿಗರಹಳ್ಳಿಯ ಸೇತುವೆ ಕುಸಿಯುವ ಅತಂಕ

ತಡೆಗೋಡೆ ಇಲ್ಲ; ಸೇತುವೆಯ ಅಡಿಪಾಯಕ್ಕೆ ಅಪಾಯ ಸಾಧ್ಯತೆ; ಅಧಿಕಾರಿಗಳ ದಿವ್ಯ ನಿರ್ಲಕ್ಷ ಅರೋಪ

ತಿಮ್ಮಯ್ಯ .ಜೆ ಪರಶುರಾಂಪುರ
Published 27 ಮಾರ್ಚ್ 2024, 6:29 IST
Last Updated 27 ಮಾರ್ಚ್ 2024, 6:29 IST
ಕೋನಿಗರಹಳ್ಳಿಯ ಸೇತುವೆ ಅಡಿಪಾಯದ ಕೆಳೆಗೆ ವೇದಾವತಿ ನದಿ ನೀರು ಹರಿಯುತ್ತಿರುವುದು
ಕೋನಿಗರಹಳ್ಳಿಯ ಸೇತುವೆ ಅಡಿಪಾಯದ ಕೆಳೆಗೆ ವೇದಾವತಿ ನದಿ ನೀರು ಹರಿಯುತ್ತಿರುವುದು   

ಪರಶುರಾಂಪುರ: ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾದುಹೋಗಿರುವ ಈ ಸೇತುವೆಗೆ ತಡೆಗೊಡೆ ಇಲ್ಲ!. ಕೆಳಭಾಗದಲ್ಲಿ ನೀರು ಸೋರಿಕೆಯಾಗಿ ಸೇತುವೆಯೇ ಕುಸಿದು ಬೀಳುವ ಅತಂಕ, ವಿದ್ಯುತ್ ಕಂಬವೊಂದು ಸೇತುವೆಗೆ ವಾಲಿಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ, ಜೀವ ಭಯದಿಂದಲೇ ದಿನವೂ ಇದೇ ಸೇತುವೆಯನ್ನು ದಾಟಬೇಕಾದ ಪಾಡು, ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸೇತುವೆಯ ದುರಸ್ತಿ ಬಗ್ಗೆ ಅಧಿಕಾರಿಗಳದ್ದು ನಿರ್ಲಕ್ಷ್ಯ ಧೋರಣೆ..

ಇದು ಪರಶುರಾಂಪುರ ಸಮೀಪದ ಕೋನಿಗರಹಳ್ಳಿಯ ಸೇತುವೆಯ ಕಥೆ.

1984ರಲ್ಲಿ ನಿರ್ಮಿಸಿದ ಈ ಸೇತುವೆ ಕೋನಿಗರಹಳ್ಳಿ, ತೋರೆಬೀರನಹಳ್ಳಿ, ಟಿ.ಎನ್.ಕೋಟೆ, ಮೇಲುಕೋಟೆಯಿಂದ ನಾರಾಯಣಪುರ, ಬೆಳೆಗೆರೆ, ಯಲಗಟ್ಟೆ, ಚಿಕ್ಕೆನಹಳ್ಳಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಇಷ್ಟು ವರ್ಷ ಈ ಎಲ್ಲ ಹಳ್ಳಿಗರಿಗೆ ಸಂಚಾರಕ್ಕೆ ಆಧಾರವಾಗಿದ್ದ ಸೇತುವೆ ಈಗ ಕುಸಿಯುವ ಹಂತಕ್ಕೆ ತಲುಪಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳೀಯರು. 

ADVERTISEMENT

ಮಾ.22ರಂದು ವೇದಾವತಿ ನದಿಗೆ ವಾಣಿವಿಲಾಸ ಸಾಗರದ ನೀರನ್ನು ಹರಿಸಲಾಗುತ್ತಿದೆ. ಕೋನಿಗರಹಳ್ಳಿ ಬಳಿಯ ಇದೇ ಸೇತುವೆಯ ಅಡಿಯಲ್ಲಿ ನದಿಯ ನೀರು ಹಾದುಹೋಗುತ್ತಿದೆ. ಆದರೆ ಈ ಬಾರಿ ಸೇತುವೆಯ ಅಡಿಪಾಯದ ಕೆಳಗಡೆಯಿಂದ ನೀರು ಸೋರಿಕೆಯಾಗುತ್ತಿರುವುದು ಸೇತುವೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮೂಡಿಸಿದೆ. 

ನೀರು ಸೇತುವೆಯ ಅಡಿಭಾಗದಲ್ಲಿ ಹರಿದು ಹೋಗುತ್ತಿದ್ದು, ಸೇತುವೆ ಸಂಪೂರ್ಣ ಕುಸಿಯುವ ಹಂತ ತಲುಪಿದಂತೆ ಕಾಣುತ್ತಿದೆ. ಒಂದು ವೇಳೆ ಸೇತುವೆ ಕುಸಿದುಬಿದ್ದರೆ, ಜನರು ಸಂಪರ್ಕ ಕಳೆದು ಕೋಳ್ಳುತ್ತಾರೆ ಎಂಬ ಭೀತಿಯಲ್ಲಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿದ್ದಾರೆ ಎಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಈ ಭಾಗದಲ್ಲಿ ಭಾರಿ ಮಳೆಯಾಗಿ ಸೇತುವೆಯ ಮೇಲೆ ನೀರು ಹರಿದಿತ್ತು. ನೀರಿನ ರಭಸಕ್ಕೆ ಸೇತುವೆ ಬಿದ್ದು ಹೋಗುವ ಹಂತ ತಲುಪಿತ್ತು. ಆಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಊರಿನ ಯುವಕರು ಸೇರಿ ಸೇತುವೆ ಮೇಲಿನ ತಡೆಗೊಡೆಯನ್ನು ಒಡೆದು ಹಾಕಿ, ನೀರಿನ ಹರಿವನ್ನು ಸುಗಮಗೊಳಿಸಿದ್ದರು. ತಡೆಗೋಡೆ ಒಡೆದು, ಸೇತುವೆಗೆ ಆಗಬಹುದಿದ್ದ ದೊಡ್ಡ ಹಾನಿಯನ್ನು ತಪ್ಪಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸೇತುವೆಯ ತಡೆಗೊಡೆ ನಿರ್ಮಾಣ ಮಾಡಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಲ್ಲವೇ ಎಂಬುದು ಇಲ್ಲಿನ ಸಾರ್ವಜನಿಕರ ಪ್ರಶ್ನೆ.

ಇದೀಗ ವಿ.ವಿ.ಸಾಗರದ ನೀರು ಹರಿಯುತ್ತಿದ್ದು, ಸೇತುವೆ ಕುಸಿಯುವ ಅತಂಕ ಮತ್ತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಈ ಭಾಗದ ಎಲ್ಲ ಹಳ್ಳಿಗಳ ಜನರು ಮುಂಬರುವ ಲೋಕಸಭೆ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಕೋನಿಗರಹಳ್ಳಿಯ ಸೇತುವೆ ಮೇಲೆ ತಡೆಗೊಡೆ ಇಲ್ಲದಿರುವುದು ಮತ್ತು ವಿದ್ಯುತ್ ಕಂಬ ಸೇತುವೆಗೆ ವಾಲಿಕೊಂಡಿರುವುದು

ಸೇತುವೆಯ ತಡೆಗೊಡೆ ನಿರ್ಮಿಸಲು ಇಲಾಖೆಯಲ್ಲಿ ಅವಕಾಶವಿದೆ. ಸದ್ಯದಲ್ಲೇ ನಿರ್ಮಾಣಕ್ಕೆ ಯತ್ನಿಸಲಾಗುವುದು

-ಓ.ಕೆ.ರಾಜಪ್ಪ ಲೋಕೋಪಯೋಗಿ ಇಲಾಖೆ ಎಂಜಿನಿಯರ್

ಕೋನಿಗರಹಳ್ಳಿಯಲ್ಲಿ ಇರುವುದು ಬ್ಯಾರೆಜ್ ಅಲ್ಲ ಸೇತುವೆ. ಹಾಗಾಗಿ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ 

-ರವಿಕುಮಾರ್ ಸಣ್ಣನೀರಾವರಿ ಇಲಾಖೆ ಎಂಜಿನಿಯರ್

ಯಾವ ಅಧಿಕಾರಿಗಳೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಸೇತುವೆ ಪರಿಸ್ಥಿತಿ ಅವಲೋಕಿಸಬೇಕಿದೆ

-ದಾಸೇಗೌಡ ಗ್ರಾಮ ಪಂಚಾಯಿತಿ ಸದಸ್ಯ ಕೋನಿಗರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.