ADVERTISEMENT

ಗ್ರಾ.ಪಂ. ಚುನಾವಣೆಗೆ ಸಜ್ಜಾಗಿವೆ ಪಕ್ಷಗಳು

ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರಲ್ಲಿ ಮೂಡಿದ ಹುಮ್ಮಸ್ಸು

ಜಿ.ಬಿ.ನಾಗರಾಜ್
Published 5 ಡಿಸೆಂಬರ್ 2020, 3:05 IST
Last Updated 5 ಡಿಸೆಂಬರ್ 2020, 3:05 IST
ಎಂ.ಕೆ.ತಾಜ್‌ಪೀರ್‌
ಎಂ.ಕೆ.ತಾಜ್‌ಪೀರ್‌   

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತವಾಗಿ ನಡೆದರೂ ರಾಜಕೀಯ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯತಂತ್ರ ಹೆಣೆಯುವಲ್ಲಿ ತಲ್ಲೀನವಾಗಿವೆ.

ಚುನಾವಣೆ ನಿರೀಕ್ಷೆಯಲ್ಲಿದ್ದ ಮೂರು ಪಕ್ಷಗಳು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದವು. ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕಾರ್ಯರ್ತರಿಗೆ ತರಬೇತಿ, ಪಂಚಾಯಿತಿ ಮಟ್ಟದ ಸಭೆ, ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಯುತ್ತಿದೆ. ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯಲಿದೆ. ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಮೊದಲ ಹಂತ ಹಾಗೂ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮುರಿನಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತಕ್ಕೆ ಡಿ. 7ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯುವ ಉದ್ದೇಶದಿಂದ ಮೂರೂ ಪಕ್ಷಗಳು ಸಕ್ರಿಯವಾಗಿವೆ.

ADVERTISEMENT

ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಚಿತ್ರದುರ್ಗದ ಚಿತ್ರಣ ಐದು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. 2015ರಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಾಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರಭಾವ ಹೆಚ್ಚಿತ್ತು. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಲೋಕಸಭಾ ಸದಸ್ಯರು ಕೂಡ ಕಾಂಗ್ರೆಸ್‌ ಪಕ್ಷದವರೇ ಇದ್ದರು. 2018ರ ವಿಧಾನಸಭಾ ಚುನಾವಣೆಯ ಬಳಿಕ ಜಿಲ್ಲೆಯ ರಾಜಕೀಯ ಮತ್ತೊಂದು ರೀತಿಯಲ್ಲಿ ಧ್ರುವೀಕರಣಗೊಂಡಿದೆ. ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ಲೋಕಸಭಾ ಕ್ಷೇತ್ರವೂ ಬಿಜೆಪಿ ವಶವಾಗಿದೆ. ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ.

ಜಿಲ್ಲೆಯಲ್ಲಿ ಸೋಲಿನ ದಾರಿ ತುಳಿದಿರುವ ಕಾಂಗ್ರೆಸ್‌ಗೆ ಇದು ಮಹತ್ತರ ಚುನಾವಣೆಯಾಗಿದೆ. ಗೆಲುವಿನ ಕುದುರೆ ಏರಿದ ಬಿಜೆಪಿ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುವ ಉತ್ಸಾಹದಲ್ಲಿದೆ. ಹಿರಿಯೂರು ಸೇರಿದಂತೆ ಹಲವೆಡೆ ಪ್ರಾಬಲ್ಯ ಹೊಂದಿದ್ದ ಜೆಡಿಎಸ್‌, ಮತಬ್ಯಾಂಕ್‌ ಉಳಿಸಿಕೊಳ್ಳುವ ಹವಣಿಕೆಯಲ್ಲಿದೆ. ಮೂರು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಹೋಲಿಸಿದರೆ ಬಿಜೆಪಿ ಹೆಚ್ಚು ತಯಾರಿ ಮಾಡಿಕೊಂಡಿರುವಂತೆ ಕಾಣುತ್ತಿದೆ.

ಹಳ್ಳಿ ಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಕೊಡಲು ಬಿಜೆಪಿ ಮುಂದಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅರಣ್ಯ ಸಚಿವ ಆನಂದ್‌ ಸಿಂಗ್‌, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನೇತೃತ್ವದ ಸಮಿತಿ ‘ಗ್ರಾಮ ಸ್ವರಾಜ್ಯ’ ಸಮಾವೇಶ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದೆ. ಪಂಚರತ್ನ, ಪಂಚಸೂತ್ರ ಯೋಜನೆಯನ್ನು ರೂಪಿಸಿ ಮತದಾರರ ಮನಗೆಲ್ಲಲು ತಯಾರಾಗಿದೆ.

ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್‌ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ತಯಾರಿಯ ಬಗ್ಗೆ ಹಲವು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಹೊಣೆ ನೀಡಲಾಗಿದೆ. ಪ್ರತಿ ಬ್ಲಾಕ್‌ ಹಾಗೂ ತಾಲ್ಲೂಕಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಜೆಡಿಎಸ್‌ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ಕಾಣುತ್ತಿಲ್ಲ. ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲು ಜೆಡಿಎಸ್‌ ಮುಂದಾಗಿದೆ. ಯುವ ನಾಯಕರು, ಗ್ರಾಮ ಮಟ್ಟದ ಮುಖಂಡರನ್ನು ಬಿಜೆಪಿ ತನ್ನತ್ತ ಸೆಳೆಯುತ್ತಿದೆ. ಪಕ್ಷದ ಆಧಾರದಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ಪಕ್ಷಗಳು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿವೆ.

***

ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ದಿನದಿಂದಲೇ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್‌ ಕೊಡುಗೆಗಳನ್ನು ಮತದಾರರಿಗೆ ತಲುಪಿಸುತ್ತಿದ್ದೇವೆ. ಓಲೈಕೆ ರಾಜಕೀಯ ಮಾಡುತ್ತಿಲ್ಲ.

ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

***

ಬೂತ್‌ ಮಟ್ಟದಲ್ಲಿ ಐವರು ಕಾರ್ಯಕರ್ತರನ್ನು ಸೇರಿಸಿ ಸಮಿತಿ ರಚಿಸಲಾಗಿದೆ. ವಾರ್‌ರೂಂ, ಕಾಲ್‌ ಸೆಂಟರ್‌ ತೆರೆಯಲಾಗಿದೆ. ಶೇ 80ಕ್ಕೂ ಹೆಚ್ಚು ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುತ್ತೇವೆ.

ಎ.ಮುರುಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಪ್ರಾದೇಶಿಕ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ಪ್ರಭಾವ ಹೊಂದಿದ್ದು, ಜಿಲ್ಲಾ ಮಟ್ಟದ ಮುಖಂಡರ ಸಭೆ ನಡೆಯಲಿದೆ.

ಡಿ.ಯಶೋಧರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.