ADVERTISEMENT

ಚಿತ್ರದುರ್ಗ: ಬಸ್‌ ಸಂಚಾರಕ್ಕೆ ಪ್ರಯಾಣಿಕರ ಸ್ಪಂದನ

ಲಾಕ್‌ಡೌನ್ ನಿರ್ಬಂಧ ಸಡಿಲಗೊಂಡ ಮೊದಲ ದಿನವೇ ರಸ್ತೆಗೆ ಇಳಿದ ಕೆಎಸ್‌ಆರ್‌ಟಿಸಿ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:04 IST
Last Updated 22 ಜೂನ್ 2021, 6:04 IST
ಚಿತ್ರದುರ್ಗ ವಿಭಾಗದಿಂದ ಸೋಮವಾರ ನಿಯಮ ಪಾಲಿಸಿ ಬಸ್‌ ಸಂಚರಿಸಿತು
ಚಿತ್ರದುರ್ಗ ವಿಭಾಗದಿಂದ ಸೋಮವಾರ ನಿಯಮ ಪಾಲಿಸಿ ಬಸ್‌ ಸಂಚರಿಸಿತು   

ಚಿತ್ರದುರ್ಗ: ಲಾಕ್‌ಡೌನ್ ನಿರ್ಬಂಧ ಸಡಿಲಗೊಂಡ ಮೊದಲ ದಿನವೇ ರಸ್ತೆಗೆ ಇಳಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಪ್ರಯಾಣಿಕರಿಂದ ನಿರೀಕ್ಷೆ ಮೀರಿ ಪ್ರತಿಸ್ಪಂದನೆ ಸಿಕ್ಕಿದೆ. ಮೊದಲ ದಿನವೇ 67 ಬಸ್‌ಗಳು ಸಂಚರಿಸಿವೆ.

ಬೆಳಿಗ್ಗೆ 6.30ರಿಂದ ಆರಂಭವಾದ ಬಸ್‌ ಸಂಚಾರ ಸಂಜೆ 7ರವರೆಗೆ ನಿರಂತರವಾಗಿ ನಡೆಯಿತು. ತಾಲ್ಲೂಕು ಕೇಂದ್ರ ಹಾಗೂ ನೆರೆಹೊರೆಯ ಜಿಲ್ಲೆಗಳಿಗೆ ಮಾತ್ರ ಬಸ್‌ ಸೇವೆ ಒದಗಿಸಿದವು. ನಾಳೆ ಇನ್ನಷ್ಟು ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಆದರೆ, ಗ್ರಾಮೀಣ ಪ್ರದೇಶಕ್ಕೆ ಸೇವೆ ಇನ್ನೂ ಅನುಮಾನ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ವಿಧಿಸಿದ್ದರಿಂದ 50 ದಿನಗಳಿಂದ ಬಸ್‌ ಸಂಚರಿಸಿರಲಿಲ್ಲ. ಎರಡು ತಿಂಗಳ ಸುಧೀರ್ಘ ಅವಧಿಯ ಬಳಿಕ ಸಂಚಾರ ಆರಂಭಿಸಿವೆ. ಇದಕ್ಕೆ ಎರಡು ದಿನಗಳ ಮೊದಲೇ ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಂಡಿತ್ತು.

ADVERTISEMENT

ಬಸ್ ನಿಲ್ದಾಣಕ್ಕೆ ಬೆಳಿಗ್ಗೆಯಿಂದಲೇ ಪ್ರಯಾಣಿಕರು ಬಂದಿದ್ದರು. ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಸೇವೆ ಒದಗಿಸಲಾಯಿತು. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಸೇರಿ ಹಲವೆಡೆಗೆ ಬಸ್‌ ಸಂಚರಿಸಿದವು. ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಿಗೆ ಸೇವೆ ಒದಗಿಸಿದವು. ನಗರದಿಂದ ಹೊರಟ ಬಸ್‌ಗಳು ಮಧ್ಯೆ ಯಾವ ಸ್ಥಳದಲ್ಲಿಯೂ ನಿಲುಗಡೆ ಮಾಡಲಿಲ್ಲ.

45 ವರ್ಷ ಮೇಲ್ಪಟ್ಟ ಸಿಬ್ಬಂದಿಯಲ್ಲಿ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಿಬ್ಬಂದಿಗಳಲ್ಲಿ ಒಂದು ಡೋಸ್ ಲಸಿಕೆ ಪಡೆವರು ಕರ್ತವ್ಯಕ್ಕೆ ಹಾಜರಾಗಿದ್ದರು. 72 ಗಂಟೆ ಮೊದಲು ಕೊರೊನಾ ಪರೀಕ್ಷೆಯ ಪ್ರಮಾಣ ಪತ್ರ ತರುವಂತೆ ಸೂಚಿಸಲಾಗಿತ್ತು. ಇರುವ ಸಿಬ್ಬಂದಿಗಳಿಗೆ ದಿನಬಿಟ್ಟು ದಿನ ಕರ್ತವ್ಯಕ್ಕೆ ನಿಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಚಿತ್ರದುರ್ಗ ವಿಭಾಗದ ಸಂಚಾರ ನಿಯಂತ್ರಕರಾದ ಚನ್ನಬಸಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.