ಹೊಸದುರ್ಗ: ದಿನಕ್ಕೆ ಸಾವಿರ ಜನರು ಬಂದು ಹೋಗುವ ಇಲ್ಲಿಗೆ ಸಮೀಪದ ಹ್ಯಾಂಡ್ ಪೋಸ್ಟ್‌ನಲ್ಲಿ ಸಮರ್ಪಕ ಬಸ್ ನಿಲ್ದಾಣ ಇಲ್ಲ. ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಈ ಜಾಗ, ರಾಷ್ಟ್ರೀಯ ಹೆದ್ದಾರಿ 47ಕ್ಕೆ ಹೊಂದಿಕೊಂಡಿದೆ. ಈ ಕಾರಣಕ್ಕೆ ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಿಗೆ ಈ ಮಾರ್ಗದ ಮೂಲಕವೇ ಹೆಚ್ಚಾಗಿ ಬಸ್‌ಗಳು ಸಂಚರಿಸುತ್ತವೆ. ಹೆಚ್ಚು ಜನಸಂದಣಿ ಇದ್ದರೂ ಅದಕ್ಕೆ ತಕ್ಕುದಾದ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ.
ಹಾಗಲಕೆರೆ, ಬೆಲಗೂರು, ಮೆಣಸಿನೊಡು, ಕಬ್ಬಳ, ಕಾರೇಹಳ್ಳಿ ಸೇರಿದಂತೆ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿಯ ಸುತ್ತಲಿನ 25ಕ್ಕೂ ಅಧಿಕ ಗ್ರಾಮಗಳಿಂದ ನಿತ್ಯ ಓಡಾಡುವ 800 ರಿಂದ 1000 ಜನರಿಗೆ ಹ್ಯಾಂಡ್‌ಪೋಸ್ಟ್ ಬಸ್ ನಿಲ್ದಾಣವೇ ಆಸರೆ. ನಿಲ್ದಾಣದ ಸ್ವರೂಪದ ಹಳೆಯ ಕಟ್ಟಡವೊಂದು ಇದ್ದೂ ಇಲ್ಲದಂತಿದೆ. ಬೆಲಗೂರು, ಕಬ್ಬಳ ಮಾರ್ಗವಾಗಿ ಪ್ರಯಾಣಿಸುವವರು ರಸ್ತೆ ಪಕ್ಕದಲ್ಲಿ ಅಥವಾ ಸೇತುವೆ ಮೇಲೆ ಕುಳಿತುಕೊಳ್ಳುತ್ತಾರೆ. ಬೆಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪಕ್ಕದ ಅಂಗಡಿಗಳ ಎದುರಿನಲ್ಲಿ ಕುಳಿತಿರುತ್ತಾರೆ. ನಿತ್ಯ ರಾತ್ರಿ 11 ಗಂಟೆಯವರೆಗೂ ಪ್ರಯಾಣಿಕರು ಇಲ್ಲಿರುತ್ತಾರೆ. ಮಳೆ, ಬಿಸಿಲಿನ ಸಮಯದಲ್ಲಿ ಪರದಾಟ ಸಾಮಾನ್ಯವಾಗಿದೆ.
‘ಶೌಚಾಲಯ ಹಾಗೂ ಕುಡಿಯುವ ನೀರು, ಬೀದಿ ದೀಪದ ಸೌಲಭ್ಯ ಇಲ್ಲಿಲ್ಲ. ಈ ಹಿಂದೆ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ತೆರವು ಮಾಡಿದ್ದ ಕಂಬವನ್ನು ಒಂದೂವರೆ ವರ್ಷವಾದರೂ ಮತ್ತೆ ಅಳವಡಿಸಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.
ಮೂಲ ಸೌಕರ್ಯ ಇಲ್ಲ: ಕಾರೇಹಳ್ಳಿ ಪಂಚಾಯಿತಿಗೆ ಸೇರಿದ ಮಳಿಗೆಗಳು ಹ್ಯಾಂಡ್ ಪೋಸ್ಟ್ ಬಳಿ ಇವೆ. ತಿಂಗಳಿಗೆ ನಮ್ಮಿಂದ ₹2,500 ಪಡೆಯಲಾಗುತ್ತದೆ. ಆದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸ್ವಚ್ಛತೆಗೂ ಗಮನ ನೀಡುತ್ತಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಪ್ರಯಾಣಿಕರ ತಂಗುದಾಣ ಇಲ್ಲದ ಕಾರಣ ನಿಗದಿತ ಸ್ಥಳದಲ್ಲಿ ಬಸ್‌ಗಳ ನಿಲುಗಡೆ ಮಾಡುವುದಿಲ್ಲ. ಒಂದೊಂದು ಬಸ್ ಒಂದೊಂದು ಕಡೆ ನಿಲ್ಲುತ್ತವೆ. ನಾವು ಓಡಿ ಹೋಗಿ ಹತ್ತಬೇಕುವನಜಾಕ್ಷಿ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.