ADVERTISEMENT

ಚಿತ್ರದುರ್ಗ | ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 17 ಮೇ 2020, 10:59 IST
Last Updated 17 ಮೇ 2020, 10:59 IST
   

ಚಿತ್ರದುರ್ಗ: ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅನುಮಾನದ ಮೇರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದ ವ್ಯಕ್ತಿ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗುಜರಾತಿನ ಅಹಮದಾಬಾದಿನಿಂದ ಬಂದಿದ್ದ ತಬ್ಲಿಗಿ ಜಮಾತ್ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದ 55 ವರ್ಷದ ವ್ಯಕ್ತಿಯನ್ನು ಸರ್ಕಾರಿ ವಸತಿನಿಲಯದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸೋಂಕಿತರಿಗೆ ಆಹಾರ ಒದಗಿಸಿದ ಕಾರಣಕ್ಕೆ ಇವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ನಿಗಾದಲ್ಲಿ ಇಡಲಾಗಿತ್ತು.

‘ನಗರದ ಧವಳಗಿರಿ ಬಡಾವಣೆ ನಿವಾಸಿಯಾದ ಇವರನ್ನು ಜಿಲ್ಲಾ ಪಂಚಾಯಿತಿ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು’ ಎಂದು ಜಿಲ್ಲಾಧಿಕಾರಿ ಆರ್.ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

‘ನಸುಕಿನಲ್ಲಿ ಇವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಶನಿವಾರ ಸಂಜೆಯೂ ಒಮ್ಮೆ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೃದಯ ರೋಗ ಲಕ್ಷಣಕ್ಕೆ ಸಂಬಂಧಿಸಿದಂತೆ ಇಸಿಜಿ ಪರೀಕ್ಷೆ ಕೂಡ ಮಾಡಲಾಗಿತ್ತು. ಅದರಲ್ಲಿ ಸಹಜ (ನಾರ್ಮಲ್)ವರದಿ ಬಂದ ಕಾರಣ ಫಿಜಿಷಿಯನ್ ತಜ್ಞವೈದ್ಯರ ಸಲಹೆ ಮೇರೆಗೆ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕಳಿಸಲಾಯಿತು. ಭಾನುವಾರ ಬೆಳಿಗ್ಗೆ ಪ್ರಾರ್ಥನೆಗಾಗಿ ಎದ್ದಾಗ ಪುನಾ ತೀವ್ರ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಅಂಶವನ್ನು ವೈದ್ಯಕೀಯ ವರದಿ ದೃಢಪಡಿಸಿದೆ’ ಎಂದು ತಿಳಿಸಿದ್ದಾರೆ.

‘ಕೋವಿಡ್-19 ದೃಢಪಟ್ಟವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣ ಮೇ 9ರಂದು ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು.12ರಂದು ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ, ಎಸ್‍ಒಪಿ ಮಾರ್ಗಸೂಚಿ ಅನ್ವಯ ಪ್ರಾಥಮಿಕ ಸಂಪರ್ಕಿತರಿಗೆ ಎರಡು ಬಾರಿ ಪರೀಕ್ಷೆ ನಡೆಸುವುದು ಅಗತ್ಯ. ಅದಕ್ಕಾಗಿ ಮೇ 20ರಂದು ಮತ್ತೊಮ್ಮೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಡಬೇಕಿತ್ತು. ಈ ಕಾರಣಕ್ಕಾಗಿ ಕ್ವಾರಂಟೈನ್‍ ಮುಂದುವರೆಸಲಾಗಿತ್ತು’ ಎಂದು ತಿಳಿಸಿದ್ದಾರೆ.

‘ನಿಯಮಾನುಸಾರ 12ನೇ ದಿನದ ಗಂಟಲು ದ್ರವ ಮಾದರಿ ಸಂಗ್ರಹಿಸುವ ಮೊದಲೇ ವ್ಯಕ್ತಿಯೂ ಮೃತಪಟ್ಟಿರುವ ಹಾಗೂ ಮೊದಲ ವರದಿ ನೆಗೆಟಿವ್ ಇದ್ದ ಕಾರಣ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.