ADVERTISEMENT

ಇಂಧನ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ತಮಟೆ ಬಾರಿಸಿ ಗಮನ ಸೆಳೆದ ಮಾಜಿ ಸಚಿವ ಎಚ್‌.ಆಂಜನೇಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 14:20 IST
Last Updated 11 ಜೂನ್ 2021, 14:20 IST
ಚಿತ್ರದುರ್ಗದ ಬಿ.ಡಿ.ರಸ್ತೆಯ ಪೆಟ್ರೋಲ್‌ ಬಂಕ್‌ ಎದುರು ಮಾಜಿ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಚಿತ್ರದುರ್ಗದ ಬಿ.ಡಿ.ರಸ್ತೆಯ ಪೆಟ್ರೋಲ್‌ ಬಂಕ್‌ ಎದುರು ಮಾಜಿ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಯಿತು.   

ಚಿತ್ರದುರ್ಗ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಪೆಟ್ರೋಲ್‌ ಬಂಕ್‌ಗಳ ಎದುರು ಶುಕ್ರವಾರ ಏಕಕಾಲಕ್ಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 9ರಿಂದ 10 ಗಂಟೆಯ ಸಮಯದಲ್ಲಿ ನಗರದ ವಿವಿಧ ಪೆಟ್ರೋಲ್‌ ಬಂಕ್‌ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಆಸ್ಪತ್ರೆಯ ಮುಂಭಾಗದ ಪೆಟ್ರೋಲ್‌ ಬಂಕ್‌ ಬಳಿ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಎಚ್‌.ಆಂಜನೇಯ ತಮಟೆ ಬಾರಿಸಿ ಗಮನ ಸೆಳೆದರು. ಕೋವಿಡ್‌ ನಿಯಮ ಪಾಲಿಸಿ ಹೋರಾಟ ನಡೆಸಿದರು.

ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜನರ ನೋವಿಗೆ ಸ್ಪಂದಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನದ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಹಿಟ್ಲರ್‌ ಆಡಳಿದ ಮಾದರಿ ಗೋಚರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇಂಧನ ಬೆಲೆ ಏರಿಕೆಯಿಂದ ಕೃಷಿ, ಕೈಗಾರಿಕೆ ಕ್ಷೇತ್ರಗಳು ಬಿಕ್ಕಟ್ಟಿಗೆ ಸಿಲುಕಿವೆ. ಮಾರುಕಟ್ಟೆಯ ಮೇಲೆ ಅಡ್ಡಪರಿಣಾಮ ಉಂಟಾಗುವ ಲಕ್ಷಣಗಳು ಗೋಚರಿಸಿವೆ. ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ಹೊರಹಾಕಿದರು.

ಮೋದಿ ಅವರ ಆಡಳಿತ ವೈಖರಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದುಂಟು ಆಗುತ್ತಿದೆ. ಇದಕ್ಕೆ ದೇಶದ ಜನರ ಬಳಿ ಪ್ರಧಾನಿ ಬಹಿರಂಗ ಕ್ಷಮೆಯಾಚಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ, ರೈತ ವಿರೋಧಿ ಕಾಯ್ದೆ ಹಿಂಪಡೆಯಬೇಕು. ನೈತಿಕೆ ಹೊಣೆಹೊತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಚಳ್ಳಕೆರೆ ಗೇಟ್‌ ಸಮೀಪದ ಪೆಟ್ರೋಲ್‌ ಬಂಕ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡಿದ್ದರು. ಜೆಸಿಆರ್‌ ಬಡಾವಣೆಯಲ್ಲಿ ಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.