ADVERTISEMENT

ಚಿತ್ರದುರ್ಗ: ಸಮರ್ಪಕ ವಿದ್ಯುತ್‌ಗೆ ಆಗ್ರಹ; ವಿದ್ಯುತ್‌ ಕೇಂದ್ರಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:12 IST
Last Updated 21 ನವೆಂಬರ್ 2025, 6:12 IST
ಹೆಗ್ಗೆರೆ ಭಾಗದ ರೈತರು ಭರಮಸಾಗರದಲ್ಲಿರುವ ಕೆಪಿಟಿಸಿಎಲ್‌ ವಿದ್ಯುತ್‌ ಕೇಂದ್ರಕ್ಕೆ ನುಗ್ಗಿ ಸಮರ್ಪಕ ವಿದ್ಯುತ್‌ ಒದಗಿಸುವಂತೆ ಧರಣಿ ನಡೆಸಿದರು
ಹೆಗ್ಗೆರೆ ಭಾಗದ ರೈತರು ಭರಮಸಾಗರದಲ್ಲಿರುವ ಕೆಪಿಟಿಸಿಎಲ್‌ ವಿದ್ಯುತ್‌ ಕೇಂದ್ರಕ್ಕೆ ನುಗ್ಗಿ ಸಮರ್ಪಕ ವಿದ್ಯುತ್‌ ಒದಗಿಸುವಂತೆ ಧರಣಿ ನಡೆಸಿದರು   

ಸಿರಿಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ಒದಗಿಸಬೇಕೆಂದು ಆಗ್ರಹಿಸಿ ಭರಮಸಾಗರ ಸಮೀಪದ ಹೆಗ್ಗೆರೆ ಮತ್ತು ಸುತ್ತಲಿನ ರೈತರು ಗುರುವಾರ ಭರಮಸಾಗರ ಬೆಸ್ಕಾಂ ಕಚೇರಿ ಮತ್ತು ಕೆಪಿಟಿಸಿಎಲ್‌ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಹಲವು ತಿಂಗಳುಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಬೆಸ್ಕಾಂ ಶಾಖಾಧಿಕಾರಿಗಳು ಹೆಗ್ಗೆರೆ ಸುತ್ತಲಿನ ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ಒದಗಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ತುಂಬೆಲ್ಲ ಕೃಷಿಕರಿಗೆ ದಿನವೊಂದಕ್ಕೆ 7 ಗಂಟೆ ವಿದ್ಯುತ್‌ ನೀಡಲಾಗುತ್ತಿದ್ದರೂ ಇಲ್ಲಿ 5 ಗಂಟೆ ಮಾತ್ರ ನೀಡಲಾಗುತ್ತಿದೆ. ಅದನ್ನೂ ಸಹ ಹಗಲು ಮತ್ತು ರಾತ್ರಿ ಪಾಳಯದಲ್ಲಿ ಹಂಚಿ ನೀಡಲಾಗುತ್ತಿದೆ ಎಂದು ರೈತರು ದೂರಿದರು.

ಹೆಗ್ಗೆರೆ ಭಾಗದಲ್ಲಿ ಕೆಲ ತಿಂಗಳುಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ರೈತರು ರಾತ್ರಿ ವೇಳೆಯಲ್ಲಿ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದ್ದರಿಂದ ಈ ಭಾಗದ ಕೃಷಿಗೆ ಹಗಲು ವೇಳೆಯಲ್ಲಿಯೇ ವಿದ್ಯುತ್‌ ಒದಗಿಸಬೇಕೆಂದು ಮನವಿ ಮಾಡಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಸಹಾಯಕ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ನಾಗರಾಜ್‌ ರೈತರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಕೃಷಿಕರು ಶಾಖಾಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರು. ಕೃಷಿಕರ ಮನವಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಸಮಸ್ಯೆಗಳನ್ನು ಹೇಳಿಕೊಂಡು ಫೋನ್‌ ಮಾಡಿದರೆ ಸ್ವೀಕರಿಸುವುದಿಲ್ಲ. ವಿದ್ಯುತ್‌ ಮಾರ್ಗಗಳನ್ನು ಸರಿಯಾಗಿ ದುರಸ್ಥಿ ಮಾಡಿಸಿಲ್ಲವೆಂದು ಆರೋಪಿಸಿದರು.

ಎಇಇ ನಾಗರಾಜ್‌ ರೈತ ಯುವಕರೊಂದಿಗೆ ಮಾತನಾಡಿ, ಹೆಗ್ಗೆರೆ ಭಾಗದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಸಾಧ್ಯವಾದ ಮಟ್ಟಿಗೆ ಬಗೆಹರಿಸಲು ಯತ್ನಿಸಲಾಗುವುದು. ನಿರಂತರ ವಿದ್ಯುತ್‌ ನೀಡಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಭರಮಸಾಗರ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಹೆಗ್ಗೆರೆ ಭಾಗದ ರೈತರು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.