ADVERTISEMENT

ಬಣ್ಣ ಕೊಡ್ತೀನಿ ಬಾ ಮಳೆರಾಯ ಸುಣ್ಣ ಕೊಡ್ತೀನಿ ಬಾ... ಮಳೆಗಾಗಿ ‘ಕಪ್ಪೆ’ ಮದುವೆ

ಮದುವೆ ಸಂಭ್ರಮದಲ್ಲಿ ತೇಲಾಡಿದ ಸುತ್ತಮುತ್ತಲ ಜನತೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 12:23 IST
Last Updated 15 ಮೇ 2019, 12:23 IST
ಚಿತ್ರದುರ್ಗದಲ್ಲಿ ಬುಧವಾರ ಮಳೆಗೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿದ ದೃಶ್ಯ.
ಚಿತ್ರದುರ್ಗದಲ್ಲಿ ಬುಧವಾರ ಮಳೆಗೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿದ ದೃಶ್ಯ.   

ಚಿತ್ರದುರ್ಗ: ಅಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ದೇವಿ ದೇಗುಲವೊಂದರ ಮುಂಭಾಗ ಉತ್ತಮ ಮಳೆಗೆ ಪ್ರಾರ್ಥಿಸುವಲ್ಲಿ ಅನೇಕರು ನಿರತರಾಗಿದ್ದರು. ಆಶ್ಚರ್ಯದಿಂದ ಇಣುಕಿ ನೋಡಿದರೆ ನಡೆಯುತ್ತಿದ್ದದ್ದು ಕಪ್ಪೆ ಮದುವೆ...!

ಇಲ್ಲಿನ ಕೆಳಗೋಟೆಯ ಬೇಡರ ಕಣ್ಣಪ್ಪ ದೇಗುಲ ಸಮೀಪವಿರುವ ಗುಡಿ ಮಾಳಮ್ಮ ದೇಗುಲ ಮುಂಭಾಗದಲ್ಲಿ ಬುಧವಾರ ಮಳೆಗೆ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಕಪ್ಪೆ ಮದುವೆಯಲ್ಲಿ ಸಂಭ್ರಮದ ವಾತಾವರಣವಿತ್ತು.

‘ಮಳೆರಾಯನನ್ನು ಪ್ರಾರ್ಥಿಸಿ ದೇಗುಲ ಸಮೀಪದ ಓಣಿಯವರು ಈ ರೀತಿ ವಿಶೇಷವಾಗಿ ಕಪ್ಪೆ ಮದುವೆ ಮಾಡಿಸಿದ್ದೇವೆ. ಸತತ ನಾಲ್ಕೈದು ವರ್ಷದ ಬರದಿಂದಾಗಿ ಜನರು ಪರಿತಪಿಸುವಂತಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಲಿ ಎಂದು ಇದನ್ನು ಆಚರಿಸುತ್ತಿದ್ದೇವೆ’ ಎಂದು ಸ್ಥಳೀಯರು ತಿಳಿಸಿದರು.

ADVERTISEMENT

ಮಳೆಯಾಗದ ಸಂದರ್ಭದಲ್ಲಿ ಕತ್ತೆ ಸೇರಿ ಇತರೆ ಪ್ರಾಣಿಗಳು ಹಾಗೂ ಸರಿಸೃಪಗಳಿಗೆ ಮದುವೆ ಮಾಡುವುದು ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ. ಅದೇ ರೀತಿ ದೇಗುಲ ಮುಂಭಾಗ ಇದೇ ಪ್ರಥಮ ಬಾರಿಗೆ ಕಪ್ಪೆ ಮದುವೆ ಮಾಡಿಸಲಾಯಿತು.

ವಿವಾಹಕ್ಕೂ ಮುನ್ನ ದಿನಾಂಕವೊಂದನ್ನು ಗೊತ್ತು ಮಾಡುವುದು ಸಂಪ್ರದಾಯ. ಅದೇ ರೀತಿ ಈ ಮದುವೆಗೂ ಮುಹೂರ್ತ ನಿಗದಿ ಪಡಿಸಲಾಗಿತ್ತು. ಕಪ್ಪೆಗಳ ಮದುವೆಗೆ ಮೇ 15ರಂದು ಮಧ್ಯಾಹ್ನ 1.15 ಪ್ರಾಶಸ್ತ್ಯವಾದ ಮುಹೂರ್ತವಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಿಂದ ಅದೇ ಸಮಯಕ್ಕೆ ಸರಿಯಾಗಿ ಮದುವೆ ನಡೆಯಿತು.

ಇದೇ ಸಂದರ್ಭದಲ್ಲಿ ವಾದ್ಯ ತಂಡದವರಿಂದ ಮಂಗಳವಾದ್ಯ ಮೊಳಗಿತು. ಗಂಡು ಕಪ್ಪೆ, ಹೆಣ್ಣು ಕಪ್ಪೆ ಎಂಬುದಾಗಿ ಪ್ರತ್ಯೇಕವಾಗಿ ವಿಂಗಡಿಸಿ, ಅಕ್ಕಪಕ್ಕದ ನಾಗರಿಕರೇ ಎರಡೂ ಕಡೆಯವರಾಗಿ ಮುಂದೆ ನಿಂತು ಮದುವೆ ಶಾಸ್ತ್ರ, ಸಂಪ್ರದಾಯದಂತೆ ವಿವಾಹ ನೆರವೇರಿಸಿದರು. ನಂತರ ಅರಿಶಿನ, ಕುಂಕುಮ, ಅಕ್ಷತೆ ಹಾಕುವ ಮೂಲಕ ಮುತ್ತೈದೆ ಮಹಿಳೆಯರು ಆರತಿ ಬೆಳಗಿದರು.

ದೇಗುಲದ ಮುಂಭಾಗ ಶಾಮೀಯಾನ ಹಾಕಲಾಗಿತ್ತು. ಮದುವೆಗೆ ಬರುವವರಿಗೆ ಸ್ವಾಗತಿಸಿ, ಒಳಗೆ ಹೋಗಿ ಪಾಲ್ಗೊಳ್ಳಿ ಎಂದು ಅಲ್ಲಿದ್ದವರು ಹೇಳುತ್ತಿದ್ದರು. ಅದೇ ಸ್ಥಳದಲ್ಲಿ ಪಾಯಸ, ಪಲ್ಯ, ಕೋಸುಂಬರಿ, ಅನ್ನ, ಸಾಂಬಾರು ತಯಾರಿಸುವಲ್ಲಿ ಪಾಕ ಪ್ರವೀಣರು ಸಿದ್ಧತೆಯಲ್ಲಿ ತೊಡಗಿದ್ದ ವೇಳೆ ಗಮಗಮ ಪರಿಮಳ ಬೀರುವ ಸುವಾಸನೆ ನೆರೆದಿದ್ದವರ ಮೂಗಿಗೆ ಬಡಿಯಿತು. ಊಟಕ್ಕಾಗಿ ಕುರ್ಚಿ, ಟೇಬಲ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮದುವೆಯಾದ ನಂತರ ಮಣೆಯ ಮೇಲೆ ಕೂರಿಸಿದ್ದ ಕಪ್ಪೆಗಳನ್ನು ತಲೆಯ ಮೇಲೆ ಹೊತ್ತ ಬಾಲಕನೊಬ್ಬ ಓಣಿಯಲ್ಲಿನ ಮನೆ ಮನೆಗೆ ಅಲೆಯುತ್ತ ಸಾಗಿದಾಗ ಕಲಾವಿದರು ಡೊಳ್ಳು, ತಮಟೆ ಬಾರಿಸಿದರು. ಆಗ ನೆರೆದಿದ್ದ ಬಾಲಕರು ಕುಣಿದು ಸಂಭ್ರಮಿಸಿದರು.

‘ಬಣ್ಣ ಕೊಡ್ತೀನಿ ಬಾ ಮಳೆರಾಯ
ಸುಣ್ಣ ಕೊಡ್ತೀನಿ ಮಳೆ ಸುರಿಯೋ ಮಳೆರಾಯ
ಮಳೆ ಸುರಿಸು ಮಳೆ ಸುರಿಸು’

ಎಂದು ಪದಕಟ್ಟಿ ಹಾಡಿ ಮಳೆರಾಯನನ್ನು ಆಹ್ವಾನಿಸಿದರು.

ಬಾಲಕ ಓಣಿಯಲ್ಲಿನ ಮನೆಯೊಂದರ ಬಳಿಗೆ ಬಂದಾಗ ಮನೆಯವರು ಹೊರ ಬಂದು ಸ್ವಾಗತಿಸುವ ಮೂಲಕ ಒಂದು ತಂಬಿಗೆ ನೀರನ್ನು ಸುರಿದು ಪೂಜೆ ಸಲ್ಲಿಸಿ ಮಳೆಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು.

ಸ್ಥಳೀಯರಾದ ಮಾರಣ್ಣ, ಮಂಜುನಾಥ್, ಮಾದಣ್ಣ, ಓಬಕ್ಕ, ಲಕ್ಷ್ಮಿದೇವಮ್ಮ, ರತ್ನಮ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.