ADVERTISEMENT

ಎಸಿಬಿ ಬಲೆಗೆ ಬಿದ್ದ ಮೊರಾರ್ಜಿ ವಸತಿಶಾಲೆ ಪ್ರಾಂಶುಪಾಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:22 IST
Last Updated 19 ಆಗಸ್ಟ್ 2021, 3:22 IST
ಸೈಯದ್ ನಿಜಾಮುದ್ದೀನ್
ಸೈಯದ್ ನಿಜಾಮುದ್ದೀನ್   

ವಾಣಿವಿಲಾಸಪುರ (ಹಿರಿಯೂರು): ವಸತಿಶಾಲೆಗೆ ಪ್ರವೇಶ ನೀಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರದ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಬೆಳಗಟ್ಟ ಗ್ರಾಮದ ರೈತ ಎಚ್.ಮೂರ್ತಿ ಅವರು ಪುತ್ರ ಯಲ್ಲಪ್ಪನಿಗೆ ವಸತಿಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ‘ಒಂದು ಅಂಕ ಕಡಿಮೆ ಬಂದಿದೆ, ₹ 10,000 ಕೊಟ್ಟರೆ ನಿನ್ನ ಮಗನಿಗೆ ಶಾಲೆಗೆ ಪ್ರವೇಶ ನೀಡುತ್ತೇನೆ’ ಎಂದು ಪ್ರಾಂಶುಪಾಲರು ಹಣಕ್ಕೆ ಬೇಡಿಕೆ ಇಟ್ಟರು. ಬಡ ರೈತರಾದ ಮೂರ್ತಿ, ‘ಮೊದಲು ಮಗನನ್ನು ಶಾಲೆಗೆ ಸೇರಿಸಿಕೊಳ್ಳಿ, ನಂತರ ಹಣ ಕೊಡುತ್ತೇನೆ’ ಎಂದರು. ಮಾತಿನಂತೆ ಪ್ರವೇಶ ನೀಡಿ ಹಣ ತರುವಂತೆ ರೈತನಿಗೆ ಒತ್ತಾಯ ಮಾಡಿದರು. ಮೂರ್ತಿ ಪ್ರಾಂಶುಪಾಲರ ವಿರುದ್ಧ ಎಸಿಬಿ ಪೊಲೀಸ್ ಠಾಣೆ ಡಿವೈಎಸ್‌ಪಿ ಬಸವರಾಜ್ ಆರ್. ಮಗದುಮ್ ಅವರಿಗೆ ದೂರು ಸಲ್ಲಿಸಿದರು.

ಬುಧವಾರ ಬೆಳಿಗ್ಗೆ ಸೈಯದ್ ನಿಜಾಮುದ್ದೀನ್ ಹಣ ಪಡೆಯುವಾಗ ಎಸಿಬಿ ಪೊಲೀಸರು ವಶಕ್ಕೆ ಪಡೆದರು. ಡಿವೈಎಸ್‌ಪಿ ಬಸವರಾಜ ಆರ್.ಮಗದುಮ್‌, ಪೊಲೀಸ್ ಅಧಿಕಾರಿಗಳಾದ ವಿ.ಪ್ರವೀಣ್‍ಕುಮಾರ್, ಬಸವರಾಜ್ ಟಿ. ಬುದಾನಿ ದಾಳಿಯ ನೇತೃತ್ವ ವಹಿಸಿದ್ದರು.

ADVERTISEMENT

ನಂತರ ಪ್ರವೀಣ್‍ಕುಮಾರ್ ನೇತೃತ್ವದ ತಂಡ ಪ್ರಾಂಶುಪಾಲರ ಮನೆಯಲ್ಲಿ ಶೋಧನೆ ನಡೆಸಿದೆ. ಸಿಬ್ಬಂದಿ ಮಾರುತಿರಾಂ, ಓಬಣ್ಣ, ಫಕೃದ್ದೀನ್, ಹರೀಶ್ ಕುಮಾರ್, ಯತಿರಾಜ್, ಫಯಾಜ್, ಯೂನುಸ್, ಪ್ರಭಾಕರ್ ಹಾಗೂ ಶ್ರೀಪತಿ ಕಾರ್ಯಾಚರಣೆಯಲ್ಲಿದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.