ADVERTISEMENT

ಭ್ರಷ್ಟಾಚಾರದ ವಿರುದ್ಧ ಸೈನಿಕ ದಳ ಧರಣಿ

ಸೇವೆ ಕಾಯಂಗೊಳಿಸಲು ದಿನಗೂಲಿ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 11:43 IST
Last Updated 13 ಜನವರಿ 2020, 11:43 IST
ಚಿತ್ರದುರ್ಗದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಎದುರು ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.
ಚಿತ್ರದುರ್ಗದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಎದುರು ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.   

ಚಿತ್ರದುರ್ಗ: ಹೊರಗುತ್ತಿಗೆ ನೇಮಕಾತಿ ಪದ್ಧತಿಯನ್ನು ರದ್ದುಪಡಿಸಿ ದಿನಗೂಲಿ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಿನಗೂಲಿ ನೌಕರರ ಮಹಾಮಂಡಲ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ಪ್ರತ್ಯೇಕ ಧರಣಿ ನಡೆಸಿದರು.

ತುರುವನೂರು ರಸ್ತೆಯ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಎದುರು ಜಮಾಯಿಸಿದ ಸಮತಾ ಸೈನಿಕ ದಳದ ಸದಸ್ಯರು ನಿಗಮದ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿಗಮದಲ್ಲಿ ನಡೆದ ಹಗರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿದರು.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮವನ್ನು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 1975ರಲ್ಲಿ ರಚಿಸಿದರು. ಪರಿಶಿಷ್ಟ ಜಾತಿ ಪಟ್ಟಿಯ 101 ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯ 52 ಜಾತಿಗಳ ಅಭಿವೃದ್ಧಿಗಾಗಿ ಇದನ್ನು ಸ್ಥಾಪಿಸಲಾಯಿತು. ಇದನ್ನು ಅಂಬೇಡ್ಕರ್‌ ಅಭಿವೃದ್ಧಿ ನಿಗಮವಾಗಿ ಪರಿವರ್ತನೆ ಮಾಡಿದ ಬಳಿಕ ವ್ಯಾಪಾಕ ಭ್ರಷ್ಟಾಚಾರ ನಡೆಯುತ್ತಿದೆ. ಅಂಬೇಡ್ಕರ್‌ ಆಶಯಗಳಿಗೆ ತದ್ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ADVERTISEMENT

ಸರ್ಕಾರ ಕಲ್ಪಿಸಿದ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬದಲಿಗೆ ನಿಗಮದ ವ್ಯವಸ್ಥಾಪಕರು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿದೆ. ಎರವಲು ಸೇವೆಯಲ್ಲಿ ನಿಗಮದಲ್ಲಿ ಕಾರ್ಯನಿರ್ವಹಿಸಿ ಖಜಾನೆ ದೋಚುವ ಕೆಲಸ ನಡೆಯುತ್ತಿದೆ. ಫಲಾನುಭವಿ ಆಯ್ಕೆಯ ಹೊಣೆಯನ್ನು ಶಾಸಕರ ಹೆಗಲಿಗೆ ನೀಡುವುದನ್ನು ಕೈಬಿಡಬೇಕು. ಈ ವ್ಯವಸ್ಥೆ ಇನ್ನಷ್ಟು ಪಾರದರ್ಶಕಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೇವೆ ಕಾಯಂಗೊಳಿಸಲು ಮನವಿ:ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೊರಗುತ್ತಿಗೆ ಪದ್ಧತಿ ಅಮಾನವೀಯವಾಗಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು. ದಿನಗೂಲಿ ಆಧಾರದ ಮೇರೆಗೆ ಕಾರ್ಯನಿರ್ವಹಿಸುವವರ ಸೇವೆಯನ್ನು ಕಾಯಂಗೊಳಿಸಬೇಕು. 6ನೇ ವೇತನ ಆಯೋಗದ ಶಿಫಾರಸು 2018ರ ಏಪ್ರೀಲ್‌ಗೆ ಪೂರ್ವಾನ್ವಯಾಗುವಂತೆ ಮರು ಆದೇಶ ಹೊರಡಿಸಬೇಕು. ತುಟ್ಟಿ ಭತ್ಯೆ, ಮನೆ ಬಾಡಿಗೆ ನೌಕರರ ಕೈಸೇರುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಮಹಾಮಂಡಲದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಜಿ.ಯಶವಂತರಾಜು, ಉಪಾಧ್ಯಕ್ಷ ಆರ್‌.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಆರ್‌.ಜಯಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.