ADVERTISEMENT

ಹೊಸದುರ್ಗ| ಶಿಕ್ಷಕಿ ವರ್ಗಾವಣೆ ಹಿಂಪಡೆಯಲು ಆಗ್ರಹ

ಶ್ರೀರಂಗಪುರ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು– ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 7:09 IST
Last Updated 13 ಜನವರಿ 2023, 7:09 IST
ಹೊಸದುರ್ಗದ ಶ್ರೀರಂಗಪುರದಲ್ಲಿ ಶಿಕ್ಷಕಿ ವರ್ಗಾವಣೆ ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೊಸದುರ್ಗದ ಶ್ರೀರಂಗಪುರದಲ್ಲಿ ಶಿಕ್ಷಕಿ ವರ್ಗಾವಣೆ ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಹೊಸದುರ್ಗ: ತಾಲ್ಲೂಕಿನ ಶ್ರೀರಂಗಪುರ ಗ್ರಾಮದ ಶಿಕ್ಷಕಿ ಅರುಣಾಕ್ಷಿ ಅವರ ವರ್ಗಾವಣೆ ಹಿಂಪಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆಯಿಂದಲೇ ಶಾಲೆಗೆ ಬೀಗ ಹಾಕಿ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಶ್ರೀರಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 56 ವಿದ್ಯಾರ್ಥಿಗಳಿದ್ದು, 4 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಜ. 2ರಂದು ಇಲ್ಲಿನ ಶಿಕ್ಷಕಿ ಅರುಣಾಕ್ಷಿ ಅವರನ್ನು ಹೆಚ್ಚುವರಿ ಆಧಾರದ ಮೇಲೆ ವರ್ಗಾವಣೆ ಆದೇಶ ಬಂದಿತ್ತು. ಇದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಸಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದರು. ಆಗ ಅವರು ಇದೇ ಶಿಕ್ಷಕಿಯನ್ನು ಉಳಿಸಿಕೊಡುವುದಾಗಿ ಭರವಸೆ ನೀಡಿದ್ದರು. ಮನವಿ ಕೊಟ್ಟು 10 ದಿನಗಳಾದರೂ ಶಿಕ್ಷಣ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ.

ADVERTISEMENT

12 ದಿನಗಳಿಂದಲೂ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ಪೋಷಕರ ಬಳಿ ಶಿಕ್ಷಕರು ಹಲವು ಬಾರಿ ಮನವಿ ಮಾಡಿದರೂ, ಹೆಚ್ಚುವರಿ ವರ್ಗಾವಣೆ ಆದೇಶ ರದ್ದಾಗುವವರೆಗೂ ಶಾಲೆಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ದಿಢೀರನೆ ಶಾಲೆ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಹಾಕಿ, ಪ್ರತಿಭಟನೆ ಮಾಡುತ್ತಿದ್ದಾರೆ. ಆದೇಶ ರದ್ದಾಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದರು.

‘ಈ ಹಿಂದೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ, ಕ್ಲಸ್ಟರ್ ಮಟ್ಟಕ್ಕೆ ಹೋಗಿ ಸೋತು ಬರುತ್ತಿದ್ದೆವು. ಆದರೆ ಈ ಬಾರಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದೇವೆ. ಅದಕ್ಕೆಲ್ಲಾ ಕಾರಣ ಅರುಣಾಕ್ಷಿ ಮೇಡಂ. ಅವರು ಕಥೆ, ಹಾಡು, ಕವನ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಿಸಿಕೊಟ್ಟಿದ್ದಾರೆ. ಜೊತೆಗೆ ಇಂಗ್ಲಿಷ್ ಮಾತನಾಡುವುದನ್ನು ಕಲಿಸಿದ್ದಾರೆ. ನಾವು ನಿತ್ಯ ಇಂಗ್ಲಿಷ್ ಮಾತನಾಡುತ್ತೇವೆ. ಅರುಣಾಕ್ಷಿ ಮೇಡಂ ಹೋದರೆ, ನಾವು ಶಾಲೆಗೆ ಬರಲ್ಲ’ ಎಂದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಹೇಳಿದರು.

ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ ಮೌನೇಶ್ ಮಾತನಾಡಿದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಶಾಸಕ ಗೂಳಿಹಟ್ಟಿ ಡಿ. ಶೇಖರ್, ‘ರಾಜ್ಯದಾದ್ಯಂತ ಈ ಸಮಸ್ಯೆಯಿದೆ. ಒಬ್ಬ ಶಿಕ್ಷಕರು ಹೋದರೆ ಮತ್ತೊಬ್ಬರು ಬರುತ್ತಾರೆ. ಈ ಬಗ್ಗೆ ಗೊಂದಲ ಬೇಡ. ಮಕ್ಕಳನ್ನು ಶಾಲೆಗೆ ಕಳಿಸಿ, ವಿದ್ಯಾಭ್ಯಾಸಕ್ಕೆ ತೊಡಕಾಗೋದು ಬೇಡ’ ಎಂದರು.

ಶಿಕ್ಷಣ ಸಚಿವರೊಟ್ಟಿಗೆ ಫೋನ್‌ನಲ್ಲಿ ಮಾತನಾಡಿದ ಅವರು, ‘ಸರ್ಕಾರದ ನಿಯಮ ಪಾಲನೆ ಎಲ್ಲರ ಕರ್ತವ್ಯ ಅಗತ್ಯ. ಒಬ್ಬರಿಂದ ಇತರರಿಗೆ ತೊಂದರೆ ಆಗುವುದು ಬೇಡ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಒಂದು ಮನವಿ ಕೊಡಿ, ಖುದ್ದು ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿ, ಸಮಸ್ಯೆ ಬಗೆಹರಿಸುವತ್ತ ಚಿಂತನೆ ನಡೆಸಲಾಗುವುದು’ ಎಂದರು.

ಶಾಸಕರ ಭರವಸೆಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಅರುಣಾಕ್ಷಿ ವರ್ಗಾವಣೆ ರದ್ದು ಮಾಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಹೇಳಿ ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.