ADVERTISEMENT

ನಾಯಕನಹಟ್ಟಿ: ಸಕಾಲದಲ್ಲಿ ಸಿಗದ ಚಿಕಿತ್ಸೆ: ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:29 IST
Last Updated 1 ಡಿಸೆಂಬರ್ 2025, 7:29 IST
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯದ ಕೇಂದ್ರದ ಮುಂಭಾಗ ಭಾನುವಾರ ಸಕಾಲಕ್ಕೆ ಚಿಕಿತ್ರೆ ಸಿಗದೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಆರೋಪಿಸಿದ ಸಾರ್ವಜನಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯದ ಕೇಂದ್ರದ ಮುಂಭಾಗ ಭಾನುವಾರ ಸಕಾಲಕ್ಕೆ ಚಿಕಿತ್ರೆ ಸಿಗದೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಆರೋಪಿಸಿದ ಸಾರ್ವಜನಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು   

ನಾಯಕನಹಟ್ಟಿ: ಹೃದಯಾಘಾತವಾದ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ವ್ಯಕ್ತಿಯೊಬ್ಬರು ಮೃತಪಟ್ಟ ಕಾರಣ ಭಾನುವಾರ ಮೃತರ ಕುಟುಂಬಸ್ಥರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಎಸ್. ನಾಗರಾಜ (52) ಮೃತ ವ್ಯಕ್ತಿ. ಇವರಿಗೆ ಭಾನುವಾರ ಹೃದಯಾಘಾತ ಸಂಭವಿಸಿದ್ದು, ಬೆಳಿಗ್ಗೆ 7 ಗಂಟೆಗೆ ಪಟ್ಟಣದ ಸಮುದಾಯ ಆಸ್ಪತ್ರೆಗೆ ಕರೆದಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿದ್ದಾನೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಮರಣವನ್ನು ಖಚಿತ ಪಡಿಡಲು ಸಹ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. 

‘ಸುತ್ತಲಿನ 48 ಹಳ್ಳಿಗಳ ಜನ ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ದೊರೆಯುತ್ತಿಲ್ಲ. ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ಆಸ್ಪತ್ತೆಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಕೂಡ ದೊರೆಯುತ್ತಿಲ್ಲ. ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ಕಾರ್ಯನಿರ್ವಹಿಸುತ್ತಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಇರುವುದರಿಂದ ಸಾಕಷ್ಟು ರೋಗಿಗಳು ಪರಿತಪಿಸುವಂತಾಗಿದೆ. ನಿಗದಿತ ಅವಧಿಯಲ್ಲಿ ಸೇವೆ ಒದಗಿಸದೇ ಇರುವ ವೈದ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಹಾಗೂ ಡಿಹೆಚ್‌ಒ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಹೋಬಳಿ ಘಟಕದ ಅಧ್ಯಕ್ಷ ಇ. ನಾಗರಾಜ್ ಮೀಸೆ ಒತ್ತಾಯಿಸಿದರು.

ADVERTISEMENT

ಬೆಳಿಗ್ಗೆ 10.30 ಗಂಟೆಗೆ ಡಿಹೆಚ್‌ಒ ಡಾ. ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅಭಿನವ್, ತಾಲೂಕು ವೈದ್ಯಾಧಿಕಾರಿ ಕಾಶಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು.

‘ಸಾರ್ವಜನಿಕರ ಸಮಸ್ಯೆ ಮತ್ತು ಮೃತ ರೋಗಿಯ ಸಂಬಂಧಿಕರ ಸಮಸ್ಯೆಗಳನ್ನು ಆಲಿಸಲು ಸ್ಥಳಕ್ಕೆ ಬಂದಿದ್ದೇನೆ. ಅಗತ್ಯವಿದ್ದಲ್ಲಿ ಕರ್ತವ್ಯ ಲೋಪವೆಸಗಿರುವ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಕಠಿಣಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಕಾಲದಲ್ಲಿ ರೋಗಿಗಳಿಗೆ ಆರೋಗ್ಯ ಸೇವೆ ಲಭಿಸುವಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್ ತಿಳಿಸಿದರು.

ಪಿಎಸ್‌ಐ ಜಿ.ಪಾಂಡುರಂಗ, ವೈದ್ಯಾಧಿಕಾರಿ ಸಚಿನ್, ಗ್ರಾಮಸ್ಥರಾದ ಆರ್. ಶ್ರೀಕಾಂತ್, ಟಿ. ಶಿವದತ್ತ, ಬಸವರಾಜ, ನರಸಿಂಹಮೂರ್ತಿ, ಸೋಮಶೇಖರಪ್ಪ, ಎಸ್. ಕೃಷ್ಣಮೂರ್ತಿ, ತಾರಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.