ಚಿಕ್ಕಜಾಜೂರು: ಒಂದು ಕಾಲದಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗದೆ, ಬೇರೆಡೆ ಕಳುಹಿಸುತ್ತಿದ್ದ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಇದೀಗ ವಿದ್ಯಾರ್ಥಿಗಳೇ ಇಲ್ಲದೆ ಮುಚ್ಚುವ ಹಂತ ತಲುಪಿದೆ.
1984ರಲ್ಲಿ ಆರಂಭವಾಗಿದ್ದ ಚಿಕ್ಕಜಾಜೂರಿನ ಕಾಲೇಜು ಈ ಭಾಗದ 20ಕ್ಕೂ ಹೆಚ್ಚು ಗ್ರಾಮಗಳ ನೂರಾರು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಸರೆಯಾಗಿತ್ತು. ಆಗ ಕಾಲೇಜಿಗೆ 250ರಿಂದ 350 ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಈಗ ಚಿಕ್ಕಜಾಜೂರಿನ 4 ಪ್ರೌಢಶಾಲೆಗಳು ಸೇರಿ ಸುತ್ತಮುತ್ತಲಿನ ಗ್ರಾಮಗಳೂ ಸೇರಿ ಒಟ್ಟು 10 ಪ್ರೌಢಶಾಲೆಗಳಿದ್ದರೂ, ಎಸ್ಎಸ್ಎಲ್‌ಸಿ ನಂತರ ವಿದ್ಯಾರ್ಥಿಗಳು ಬಾರದಿರುವುದು ಕಂಡುಬಂದಿದೆ.
ಪ್ರಸಕ್ತ ವರ್ಷ ದಾಖಲಾತಿ ಸಂಖ್ಯೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೇರಿ ಕೇವಲ 35ರಿಂದ 40 ಇರುವುದು ಕಾಲೇಜು ಮುಚ್ಚುವ ಹಂತ ತಲುಪಿರುವುದನ್ನು ಸೂಚಿಸುತ್ತಿದೆ.
2018ರವರೆಗೆ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ತಲಾ ಎರಡು ಸೆಕ್ಷನ್‌ನಷ್ಟು ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೆ, ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದರು. ಫಲಿತಾಂಶವೂ ಚೆನ್ನಾಗಿಯೇ ಬರುತ್ತಿತ್ತು. ಆದರೆ, ಸಮೀಪದ ಸಾಸಲುಹಳ್ಳದಲ್ಲಿ (ಮುತ್ತುಗದೂರು) ಹಾಸ್ಟೆಲ್ ಸೌಲಭ್ಯ ಇರುವ ಖಾಸಗಿ ಕಾಲೇಜು ಆರಂಭವಾದಾಗಿನಿಂದ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿಯುತ್ತ ಬಂದಿದೆ.
ಅಲ್ಲದೆ, ಕಳೆದ ವರ್ಷದಿಂದ ವಿದ್ಯಾರ್ಥಿಗಳೇ ಇಲ್ಲದ್ದರಿಂದ ಇಲ್ಲಿನ ವಿಜ್ಞಾನ ವಿಭಾಗವನ್ನು ಮುಚ್ಚಲಾಗಿದೆ. ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಷಯಗಳ 5 ಜನ ಕಾಯಂ ಉಪನ್ಯಾಸಕರು ಹಾಗೂ ಇಬ್ಬರು ಅತಿಥಿ ಉಪನ್ಯಾಸಕರು ಇದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಬ್ಬರು ಕಾಯಂ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇರುವುದರಿಂದ ಅವರನ್ನು ಬೇರೆ ಕಾಲೇಜಿಗೆ ನಿಯೋಜಿಸಲಾಗಿದೆ.
ಹಾಸ್ಟೆಲ್‌ಗೆ ಬೇಡಿಕೆ:
ಗ್ರಾಮದಲ್ಲಿ ಸುಸಜ್ಜಿತವಾದ ಎರಡು ಅಂತಸ್ಥಿನ ಕಾಲೇಜು ಕಟ್ಟಡವಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ, ಹಳ್ಳಿಗಾಡಿನ ಪಾಲಕರು ತಮ್ಮ ಮಕ್ಕಳನ್ನು ಹಾಸ್ಟೆಲ್ ಸೌಲಭ್ಯವಿರುವ ಕಾಲೇಜಿಗೆ ಸೇರಿಸುತ್ತಿದ್ದಾರೆ. ಚಿಕ್ಕಜಾಜಾರಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದಿರುವುದೇ ಸರ್ಕಾರಿ ಕಾಲೇಜಿನಿಂದ ವಿದ್ಯಾರ್ಥಿಗಳು ವಿಮುಖವಾಗಲು ಕಾರಣ ಎಂದು ಅನೇಕ ಪಾಲಕರು ತಿಳಿಸುತ್ತಾರೆ.
ಇಲ್ಲಿ ಹಾಸ್ಟೆಲ್ ಸೌಲಭ್ಯ ಇಲ್ಲದ್ದರಿಂದ ನಮ್ಮ ಗೆಳತಿಯರು ಹೊಳಲ್ಕೆರೆ ಹಾಗೂ ಮುತ್ತುಗದೂರು ಕಾಲೇಜಿಗೆ ಸೇರಿದ್ದಾರೆಯು. ಗಾಯತ್ರಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಹುಡುಗರು ರೈಲ್ವೆ ಮೇಲ್ಸೇತುವೆ ಬಳಿ ಹೋಗಿ ಅಲ್ಲಿನ ಗಿಡಗಳ ಮರೆಯಲ್ಲಿ ಮೂತ್ರವಿಸರ್ಜನೆ ಮಾಡುವಂತಾಗಿದೆಆರ್. ವೀರಭದ್ರ ವಿದ್ಯಾರ್ಥಿ
ಹಾಸ್ಟೆಲ್ ಸೌಲಭ್ಯ ಕಲ್ಪಿಸಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಇರುವ ಕಡೆ ಕಾಲೇಜಿಗೆ ದಾಖಲಾಗುತ್ತಿದ್ದಾರೆ. ಕಾಲೇಜಿಗೆ ಸೇರಿಸುವಂತೆ ಸುತ್ತಮುತ್ತಲ ಗ್ರಾಮಗಳ ಪಾಲಕರ ಬಳಿ ಹೋದಾಗ ‘ನಿಮ್ಮಲ್ಲಿ ಹಾಸ್ಟೆಲ್ ಸೌಲಭ್ಯ ಇಲ್ಲ. ಹಾಗಾಗಿ ಬೇರೆ ಕಡೆ ಸೇರಿಸುತ್ತೇವೆ’ ಎನ್ನುತ್ತಾರೆ. ಆದ್ದರಿಂದ ಚಿಕ್ಕಜಾಜೂರಿನಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ಹಾಸ್ಟೆಲ್ ಸೌಲಭ್ಯ ಒದಗಿಸಿದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ ಜಿ.ಆರ್. ಶಿವಣ್ಣ ಪ್ರಾಂಶುಪಾಲ ಸರ್ಕಾರಿ ಪದವಿಪೂರ್ವ ಕಾಲೇಜು ಚಿಕ್ಕಜಾಜೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.