ADVERTISEMENT

ಪಿಯು ಫಲಿತಾಂಶ ಶೇ 6ರಷ್ಟು ಏರಿಕೆ

30ನೇ ಸ್ಥಾನದಲ್ಲಿ ಕೋಟೆನಾಡು, ಶೇ 56.8 ವಿದ್ಯಾರ್ಥಿಗಳು ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:32 IST
Last Updated 14 ಜುಲೈ 2020, 14:32 IST

ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕೋಟೆನಾಡಿನ ಶೇ 56.8ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಶೇ 6ರಷ್ಟು ಸುಧಾರಣೆ ಕಂಡಿದ್ದು, 32ನೇ ಸ್ಥಾನದಲ್ಲಿದ್ದ ಜಿಲ್ಲೆ 30ನೇ ಸ್ಥಾನಕ್ಕೆ ಏರಿಕೆಯಾಗಿದೆ.

2019–20ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆ ಶೇ 51.42ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಫಲಿತಾಂಶ ಸುಧಾರಣೆಗೆ ಇಲಾಖೆ ಕೈಗೊಂಡ ಕ್ರಮಗಳು ಕೊಂಚ ಫಲಪ್ರದವಾಗಿರುವಂತೆ ಕಂಡುಬಂದಿವೆ. ಇನ್ನೂ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯವಾಗದೇ ಇದ್ದರೂ, ಫಲಿತಾಂಶ ಸುಧಾರಣೆ ಕಂಡಿರುವುದು ಉಪನ್ಯಾಸಕರಲ್ಲಿ ಆಶಾಭಾವನೆ ಮೂಡಿಸಿದೆ.

ವಾಣಿಜ್ಯ ವಿಭಾಗದಲ್ಲಿ 587 ಅಂಕ ಪಡೆದ ವಿ.ಕವಿತಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 586 ಅಂಕ ಪಡೆದಿರುವ ಚಿತ್ರದುರ್ಗದ ಮಹೇಶ ಪಿಯು ಕಾಲೇಜಿನ ಆದಿತ್ಯ ಹಾಗೂ ಕಲಾ ವಿಭಾಗದಲ್ಲಿ 572 ಅಂಕ ಗಳಿಸಿದ ಬಾಲಕರ ಪಿಯು ಕಾಲೇಜಿನ ನಿತಿನ್‌ ಮೊದಲ ಸ್ಥಾನದಲ್ಲಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಸೋಂಕಿನ ಆತಂಕದಲ್ಲಿ ಪರೀಕ್ಷೆ

ಮಾರ್ಚ್‌ 4ರಿಂದ ಆರಂಭವಾದ ಪರೀಕ್ಷೆ ಮಾರ್ಚ್‌ 23ಕ್ಕೆ ಮುಕ್ತಾಯವಾಗಬೇಕಿತ್ತು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಇಂಗ್ಲಿಷ್‌ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿತ್ತು. ಲಾಕ್‌ಡೌನ್‌ ತೆರವಾದ ಹಿನ್ನೆಲೆಯಲ್ಲಿ ಜೂನ್ 18ರಂದು ಇಂಗ್ಲಿಷ್‌ ಪರೀಕ್ಷೆ ನಡೆದಿತ್ತು. ಹೊರ ಜಿಲ್ಲೆಯ 820 ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಪರೀಕ್ಷೆ ಬರೆದಿದ್ದರು. ಕೋಟೆನಾಡಿನ 54 ಪರೀಕ್ಷಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.

ಜಿಲ್ಲೆಯಲ್ಲಿ 37 ಸರ್ಕಾರಿ, 47 ಅನುದಾನಿತ ಹಾಗೂ 42 ಅನುದಾನ ರಹಿತ ಸೇರಿ ಒಟ್ಟು 126 ಪಿಯು ಕಾಲೇಜುಗಳಿವೆ. ಪರೀಕ್ಷೆ ಬರೆದ 16,301 ವಿದ್ಯಾರ್ಥಿಗಳ ಪೈಕಿ 8,302 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶ್ವಮಾನವ ಪಿಯು ಕಾಲೇಜು ಶೇ 100ರಷ್ಟು ಫಲಿತಾಂಶ ಪಡೆದಿದೆ. ನಾಲ್ವರು ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಮೂರು ದಿನಗಳಲ್ಲಿ ಇವರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಬಾಲಕಿಯರೇ ಮೇಲುಗೈ

7,632 ಬಾಲಕರು ಹಾಗೂ 8,669 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇವರಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 4,886 ಬಾಲಕಿಯರು (ಶೇ 56) ಮತ್ತು 3,416 (ಶೇ 44) ಬಾಲಕರು ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶದ 5,024 ಬಾಲಕರಲ್ಲಿ 2,236 ಮಂದಿ, 5,733 ಬಾಲಕಿಯರಲ್ಲಿ 3,147 ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ 2,608 ಬಾಲಕರಲ್ಲಿ 1,180 ಹಾಗೂ 2,936 ಬಾಲಕಿಯರಲ್ಲಿ 1,739 ಮಂದಿ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ 5,275 ವಿದ್ಯಾರ್ಥಿಗಳಲ್ಲಿ ಶೇ 72 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ 5,041 ವಿದ್ಯಾರ್ಥಿಗಳಲ್ಲಿ ಶೇ 61 ಹಾಗೂ ಕಲಾ ವಿಭಾಗದ 5,985 ವಿದ್ಯಾರ್ಥಿಗಳಲ್ಲಿ ಶೇ 37ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ ಸಾಧನೆ ತೀರಾ ಕಳಪೆಯಾಗಿದೆ.

‘ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ವಿದ್ಯಾರ್ಥಿಗಳು ಮಾತ್ರ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಪಠ್ಯ ತೀರಾ ಕಷ್ಟವಾಗುತ್ತಿದೆ. ಹೀಗಾಗಿ, ಫಲಿತಾಂಶ ಕಳಪೆಯಾಗುತ್ತದೆ. ಈ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿರುವ ಕಾರಣಕ್ಕೆ ಒಟ್ಟಾರೆ ಫಲಿತಾಂಶವೂ ಕುಸಿಯುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಸಿ.ಶೋಭಾ ವಿಶ್ಲೇಷಣೆ ಮಾಡಿದರು.

ತಜ್ಞರ ಸಮಿತಿ ರಚನೆ

ಫಲಿತಾಂಶ ಸುಧಾರಣೆಯ ಉದ್ದೇಶಕ್ಕೆ ವಿಷಯ ತಜ್ಞರು ಹಾಗೂ ಪ್ರಾಂಶುಪಾಲರ ಸಮಿತಿಗಳನ್ನು ರಚಿಸಲಾಗಿತ್ತು. ತಾಲ್ಲೂಕುವಾರು ಸಮಿತಿ ಪ್ರವಾಸ ಕೈಗೊಂಡು ಎಲ್ಲ ಕಾಲೇಜುಗಳನ್ನು ಭೇಟಿ ಮಾಡುತ್ತಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರ, ತರಗತಿಗಳನ್ನು ನಡೆಸಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿತ್ತು. ‍ಫಲಿತಾಂಶ ಸುಧಾರಣೆಯಲ್ಲಿ ಇದು ಸಹಕಾರಿಯಾಗಿದೆ ಎಂಬುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಂಬಿಕೆ.

‘ವಿಷಯ ತಜ್ಞರ ಸಮಿತಿ ಪ್ರತಿ ತಿಂಗಳು ಕಾಲೇಜುಗಳಿಗೆ ಭೇಟಿ ನೀಡುತ್ತಿತ್ತು. ಉಪನ್ಯಾಸಕರನ್ನು ವಿಶ್ವಾಸಕ್ಕೆ ಪಡೆದು ಬೋಧನೆಯ ಬಗ್ಗೆ ತಿಳಿವಳಿಕೆ ನೀಡಿತು. ವಿದ್ಯಾರ್ಥಿಗಳು ಶಕ್ತಿ ಮೀರಿ ಶ್ರಮಿಸಿದ್ದಾರೆ. ಹೀಗಾಗಿ, ಫಲಿತಾಂಶ ಕೊಂಚ ಸುಧಾರಣೆ ಕಂಡಿದೆ’ ಎನ್ನುತ್ತಾರೆ ಶೋಭಾ.

ಕನ್ನಡ ಮಾಧ್ಯಮ ಕುಸಿತ

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಶೇ 40ರಷ್ಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಶೇ 65 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದ 11 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ಮೂವರು ಮಾತ್ರ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ 3,693 ಪರೀಕ್ಷಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ ಶೇ 51ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ 5,876 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ಶೇ 33ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದವರೇ ಹೆಚ್ಚು ತೇರ್ಗಡೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.