ADVERTISEMENT

‘ಕ್ವಿಟ್‌ ಇಂಡಿಯಾ’ ದಿನಾಚರಣೆ: ‘ಇಂದಿನ ಹೋರಾಟಗಳಲ್ಲಿ ಕಾಣುತ್ತಿಲ್ಲ ಬದ್ಧತೆ’

ಆದಿಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ್‌ ಬೇಸರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:10 IST
Last Updated 10 ಆಗಸ್ಟ್ 2025, 2:10 IST
ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್‌ ಇಂಡಿಯಾ) ಚಳವಳಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್‌ ಇಂಡಿಯಾ) ಚಳವಳಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌ ಮಾತನಾಡಿದರು    

ಚಿತ್ರದುರ್ಗ: ‘ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಹೋರಾಟಗಳು ಈಗ ನಡೆಯುತ್ತಿರುವ ಹೋರಾಟಗಳಿಗೆ ಅಜಗಜಾಂತರ ವ್ಯತ್ಯಾಸ ಇದೆ. ಅಂದು ಬದ್ಧತೆಯಿಂದ ಹೋರಾಟ ಮಾಡುತ್ತಿದ್ದರು’ ಎಂದು ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್‌ ಇಂಡಿಯಾ) ಚಳವಳಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಬೇಕೆಂದು ಅಂದಿನ ಹಲವಾರು ನಾಯಕರು, ಮುಖಂಡರು, ಹೋರಾಟಗಾರರು ಈ ಚಳವಳಿಯನ್ನು ರೂಪಿಸಿದರು. ಅದರ ಪರಿಣಾಮ ಅಂದು ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಗೆ ಓಡಿಸಲು ಮುನ್ನುಡಿಯಾಯಿತು’ ಎಂದರು.

ADVERTISEMENT

‘ಅಂದು ಯಾವುದು ಸಹ ಕಾಟಾಚಾರಕ್ಕೆ ನಡೆಯುವ ಚಳವಳಿಗಳಾಗಿರಲಿಲ್ಲ. ಯಾರೇ ಹೋರಾಟಕ್ಕೆ ಕರೆ ನೀಡಿದರು ಸಹ ದೇಶದಲ್ಲಿ ಉತ್ತಮವಾದ ಜವಾಬ್ದಾರಿಯುತವಾದ ಹೋರಾಟಗಳು ನಡೆಯುತ್ತಿದ್ದವು. ಈ ರೀತಿಯಾದ ಹೋರಾಟಗಳನ್ನು ನಾವುಗಳು ಕಂಡಿಲ್ಲ. ಆದರೆ, ಪುಸ್ತಕದಲ್ಲಿ ಓದಿಕೊಂಡು ತಿಳಿದಿದ್ದೇವೆ. ಇದನ್ನೇ ಸಿನಿಮಾ ಸಹ ಮಾಡಲಾಗಿದೆ’ ಎಂದು ತಿಳಿಸಿದರು.

‘ಅಂದಿನ ಹೋರಾಟ ಎಂದರೆ ಯಾರೂ ಸಹ ಎದೆಗುಂದದೆ ಎದೆ ಒಡ್ಡುವ ಮೂಲಕ ತಮ್ಮ ಜೀವದ ಹಂಗನ್ನು ತೊರೆದು ಹೋರಾಟವನ್ನು ಮಾಡುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಹೋರಾಟ ಎಂದರೆ ಸಾಕು ಯಾರು ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕೇತಿಕವಾದ ಚಳವಳಿಗಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಪೂರ್ವಜನರು ಮಾಡಿದ ಹೋರಾಟದ ಫಲವಾಗಿ ಇಂದು ನಾವುಗಳು ಅದನ್ನು ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಂಡು ಬೇರೆಯವರು ಮಾಡಿದ ಪ್ರಶ್ನೆಗೆ ಉತ್ತರ ನೀಡುವಂತಾಗಬೇಕಿದೆ. ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುವ ಹಂತದಲ್ಲಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರನ್ನೇ ಬದಲಾಯಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌ ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ ಕುಮಾರ್‌, ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಿರಿ, ಆನಂತ್‌, ಮಂಜುನಾಥ್‌ ಇದ್ದರು.

‘ಬಿಜೆಪಿಯವರೇ ಅಧಿಕಾರ ಬಿಡಿ’

‘ಅಂದು ನಡೆದ ಕ್ವಿಟ್‌ ಇಂಡಿಯಾ ಚಳವಳಿಯ ಮಾದರಿಯಲ್ಲಿ ಇಂದು ಅಂಥದೊಂದು ಚಳವಳಿಯಾಗಬೇಕಿದೆ. ಅಂದು ಬ್ರಿಟಿಷರೇ ದೇಶವನ್ನು ಬಿಟ್ಟು ಹೋಗಿ ಎಂದು ಹೇಳಲಾಗಿತ್ತು. ಆದರೆ ಇಂದು ಬಿಜೆಪಿಯವರೇ ಅಧಿಕಾರವನ್ನು ಬಿಟ್ಟು ಹೋಗಿ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಂಗ್ರೆಸ್‌ ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಡಿ.ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.