ADVERTISEMENT

ಜನ ಸಂಕಷ್ಟದಲ್ಲಿದ್ದಾಗ ಎಚ್‌ಡಿಕೆ ವಿದೇಶಕ್ಕೆ ಹೋಗುತ್ತಾರೆ: ಸಚಿವ ಆರ್‌.ಅಶೋಕ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:52 IST
Last Updated 10 ಆಗಸ್ಟ್ 2022, 13:52 IST
   

ಚಿತ್ರದುರ್ಗ: ಜನರು ಸಂಕಷ್ಟದಲ್ಲಿದ್ದಾಗ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿದೇಶಕ್ಕೆ ತೆರಳುತ್ತಾರೆ. ಅಧಿವೇಶನ ನಡೆಯುವಾಗ ವಿಧಾನಸೌಧದ ಪ್ರವೇಶ ಮಾಡುವುದಿಲ್ಲ. ಅವರಿಗೆ ಯಾವ ರೈತರ ನೋವಿನ ಬಗ್ಗೆ ಅರಿವಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಕಿಡಿಕಾರಿದರು.

ಬೆಳೆಹಾನಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕಂದಾಯ ಸಚಿವನಾಗಿ ರಾಜ್ಯದ 14 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಎಲ್ಲಿಗೂ ಭೇಟಿ ನೀಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿಯೂ ಪಾಲ್ಗೊಂಡು ಇಂತಹ ವಿಚಾರವನ್ನು ಅವರು ಚರ್ಚಿಸುವುದಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಶೇ 60ರಷ್ಟು ಕಮಿಷನ್‌ ಇತ್ತು. ಬಿಜೆಪಿ ಮೇಲೆ ಆರೋಪ ಮಾಡಿದರೆ ಗೆಲುವು ಸುಲಭ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ಕಮಿಷನ್‌, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಎಸೆದರು.

ADVERTISEMENT

‘ಅತಿವೃಷ್ಟಿಯಿಂದ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಪರಹಾರಕ್ಕೆ ಮನವಿ ಮಾಡಲಾಗುವುದು. ಈ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಕಳೆದಬಾರಿ ಸಾವಿರ ಕೋಟಿಗೂ ಹೆಚ್ಚುವರಿ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿತ್ತು. ಇದೇ ರೀತಿ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.