ADVERTISEMENT

ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 7:46 IST
Last Updated 19 ನವೆಂಬರ್ 2025, 7:46 IST

ಹೊಸದುರ್ಗದ ಕಸಬಾ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಯಂತ್ರದ ಸಹಾಯದಿಂದ ರಾಗಿ ಕಟಾವು ಮಾಡುತ್ತಿರುವುದು

ಹೊಸದುರ್ಗದ ಕಸಬಾ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಯಂತ್ರದ ಸಹಾಯದಿಂದ ರಾಗಿ ಕಟಾವು ಮಾಡುತ್ತಿರುವುದು

ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿಯೇ ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯದ ಕಣಜ ಎಂದೇ ಹೆಸರಾಗಿರುವ ಹೊಸದುರ್ಗ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ. ತಾಲ್ಲೂಕಿನ ರೈತರು ರಾಗಿ ಕಟಾವು, ಹಸನು ಮಾಡುವುದರಲ್ಲಿ ನಿರತರಾಗಿದ್ದಾರೆ.

ADVERTISEMENT

ರಾಗಿ ಬಿತ್ತಿದಾಗಿನಿಂದ ಉತ್ತಮ ಮಳೆಯಾಗಿಲ್ಲ. ರಾಗಿ ತೆನೆ ಬರುವ ಸಂದರ್ಭ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೊರತೆಯಿಂದಾಗಿ ರಾಗಿ ಬೆಳೆ ಮುದುಡಿತು. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸುರಿದ ಮಳೆಯಿಂದಾಗಿ ರಾಗಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಜುಲೈ ಮೊದಲ ವಾರದಲ್ಲಿ ಬಿತ್ತನೆಯಾಗಿದ್ದ ರಾಗಿ ಬೆಳೆ ಇಳುವರಿ ಚೆನ್ನಾಗಿ ಬಂದಿದೆ. ಶೇ 50ರಿಂದ 60ರಷ್ಟು ಇಳುವರಿ ಕೈಗೆಟುಕಿದೆ. ತಾಲ್ಲೂಕಿನ ವಿವಿಧೆಡೆ ರಾಗಿ ಕೊಯ್ಲು ಆರಂಭವಾಗಿದೆ.

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತಲಾಗಿದ್ದು, ಕಸಬಾ ಹಾಗೂ ಶ್ರೀರಾಂಪುರ ಹೋಬಳಿಗಳಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿದೆ. ಬಿತ್ತನೆ ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಬೆಳೆಗಾರರಲ್ಲಿ ಆತಂಕ ಉಂಟಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಮಳೆಯಾದ ಪರಿಣಾಮ ಸಮೃದ್ಧವಾದ ರಾಗಿ ಬಂದಿದೆ.

‘ಬೆಂಬಲ ಬೆಲೆ ಅಡಿ ಕ್ವಿಂಟಲ್‌ಗೆ ₹ 4,886ರಂತೆ ರಾಗಿ ಖರೀದಿ ಕೇಂದ್ರಕ್ಕೆ ಬಿಡಲಾಗುವುದು. ಜೊತೆಗೆ ಜಾನುವಾರುಗಳಿಗೂ ಸಹ ಮೇವು ಒದಗಿಸಲು ಸಮಸ್ಯೆಯಿಲ್ಲ. ರಾಗಿ ಹುಲ್ಲು ಖರೀದಿಸಲು ತರೀಕೆರೆ, ಬಸವಾಪಟ್ಟಣ, ಚೆನ್ನಗಿರಿ ಸೇರಿದಂತೆ ಹಲವೆಡೆಯಿಂದ ಬಂದು ಒಂದು ಪೆಂಡಿಗೆ ₹ 250 ರಂತೆ ಖರೀದಿಸುತ್ತಾರೆ’ ಎಂದು ರೈತರು ತಿಳಿಸಿದರು.

ಐದಾರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಿಂದ ರಾಗಿ ಕಟಾವು ಮಾಡಿಸಿ, ಸುಗ್ಗಿಯ ರೀತಿ ಖಣದಲ್ಲಿ ಅವುಗಳನ್ನು ಹಸನುಗೊಳಿಸಲಾಗುತ್ತಿತ್ತು. ಸ್ಥಳೀಯರಿಗೆ ಕೂಲಿ ಜೊತೆಗೆ ರಾಗಿಯೂ ದೊರೆಯುತ್ತಿತ್ತು. ಮಹಿಳೆಯರು ವರ್ಷಕ್ಕಾಗುವಷ್ಟು ರಾಗಿ ಸಂಗ್ರಿಹಿಸಿ, ಊಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಕಟಾವು ಯಂತ್ರದಿಂದಾಗಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಸುಗ್ಗಿಯಂತೂ ದೂರದ ಮಾತು. ‘ರಾಗಿ ಕೊಯ್ಲು ಮತ್ತು ಹಸನು ಮಾಡಲು 2ರಿಂದ 3 ತಿಂಗಳು ಬೇಕಾಗುತ್ತಿತ್ತು. ಒಮ್ಮೊಮ್ಮೆ ಕಾರ್ಮಿಕರೂ ಸಿಗುತ್ತಿರಲಿಲ್ಲ. ಸದ್ಯ ಯಂತ್ರದಿಂದ ಕೆಲವೇ ಗಂಟೆಗಳಲ್ಲಿ ರಾಗಿ ಮನೆಗೆ ಬರುತ್ತದೆ. ಜಮೀನಿನಲ್ಲಿಯೇ 3ರಿಂದ 4 ದಿನಗಳು ಹುಲ್ಲು ಒಣಗಿಸಿ, ಪೆಂಡಿ ಯಂತ್ರದ ಸಹಾಯದಿಂದ  ಕಟ್ಟಿಸಿ ಮನೆಗೆ ತರಲಾಗುತ್ತಿದೆ. ಯಂತ್ರಗಳ ಸಹಾಯದಿಂದ ಅಧಿಕ ಶ್ರಮವಿಲ್ಲದೆ ರಾಗಿ ಕಟಾವು ಮಾಡಿಸಬಹುದು’ ಎನ್ನುತ್ತಾರೆ ತಾಲ್ಲೂಕಿನ ಕೊಂಡಾಪುರ ಗ್ರಾಮದ ರೈತ ಲವಕುಮಾರ್.

ಕಟಾವು ಯಂತ್ರಗಳದ್ದೇ ಕಾರುಬಾರು

ತಾಲ್ಲೂಕಿನಾದ್ಯಂತ ಬೆಳಗಾವಿ, ಕೊಪ್ಪಳ, ವಿಜಯಪುರ, ಹೊಸಪೇಟೆ, ಬಳ್ಳಾರಿ, ದಾವಣಗೆರೆ, ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ ನೂರಕ್ಕೂ ಅಧಿಕ ರಾಗಿ ಕಟಾವು, ಒಕ್ಕಣೆ ಯಂತ್ರಗಳು ಬಂದಿದ್ದು, ಎಲ್ಲಾ ಜಮೀನುಗಳಿಗೊ ಲಗ್ಗೆ ಇಟ್ಟಿವೆ. ಕಟಿವಿಗೆ ಎಕರೆಗೆ ₹ 2,500ರಿಂದ ₹ 3,000 ದರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.