ADVERTISEMENT

ಚಿತ್ರದುರ್ಗ: ರೈಲ್ವೆ ಕೆಳಸೇತುವೆ; ಸಂಚಾರ ದಟ್ಟಣೆ ಸಮಸ್ಯೆ

ಅತಿಯಾದ ಮಳೆ ಆದಾಗಲೆಲ್ಲಾ ಕೆಲಕಾಲ ಸಂಚಾರ ಸ್ಥಗಿತ

ಕೆ.ಎಸ್.ಪ್ರಣವಕುಮಾರ್
Published 28 ನವೆಂಬರ್ 2021, 7:27 IST
Last Updated 28 ನವೆಂಬರ್ 2021, 7:27 IST
ಮಂಜುನಾಥ್
ಮಂಜುನಾಥ್   

ಚಿತ್ರದುರ್ಗ: ಸಂಚಾರ ಸಮಸ್ಯೆ ನಿಯಂತ್ರಿಸಲು ನಗರ ವ್ಯಾಪ್ತಿಯ ಮುಖ್ಯರಸ್ತೆಯೊಂದರ ಮಾರ್ಗದಲ್ಲಿ ಕೆಲ ವರ್ಷಗಳ ಹಿಂದೆಯಷ್ಟೇ ರೈಲ್ವೆ ಕೆಳಸೇತುವೆ ನಿರ್ಮಿಸಿದರೂ ಟ್ರಾಫಿಕ್‌ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ಈಗಲೂ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಇಲ್ಲಿಯ ಮೆದೇಹಳ್ಳಿ ರಸ್ತೆ ಮಾರ್ಗದಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆಯಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಸವಾರರ ಸಮಯ ಉಳಿಸಲು ನಿರ್ಮಾಣವಾದ ಕೆಳಸೇತುವೆಯಿಂದ ಒಂದೆಡೆ ಅನುಕೂಲವಾದರೂ, ಮತ್ತೊಂದೆಡೆ ನಿರೀಕ್ಷೆಯಂತೆ ಹೆಚ್ಚು ಪ್ರಯೋಜನವಾಗಿಲ್ಲ.

ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣ 1 ಕಿ.ಮೀ ದೂರದಲ್ಲಿ ಈ ಕೆಳಸೇತುವೆ ನಿರ್ಮಿಸಲಾಗಿದೆ. ರೈಲುಗಳು ಸಂಚರಿಸುವಾಗ ಕನಿಷ್ಠ 20 ನಿಮಿಷವಾದರೂ ಈ ಮುಂಚೆ ಮಾರ್ಗದಲ್ಲಿ ಕಾಯಬೇಕಿತ್ತು. ಎರಡು ಕಡೆ ಅಧಿಕ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ರೈಲ್ವೆ ಗೇಟ್‌ ತೆಗೆದ ಬಳಿಕ ಒಮ್ಮೆಗೆ ರೈಲ್ವೆ ಹಳಿ ದಾಟಲು ವಿಪರೀತ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಇಲ್ಲಿ ಕೆಳಸೇತುವೆ ನಿರ್ಮಾಣವಾಯಿತು. ಆದರೂ ಸಂಚಾರ ಸಮಸ್ಯೆ ಜೀವಂತವಾಗಿದೆ.

ADVERTISEMENT

ಈ ಮಾರ್ಗದಲ್ಲಿ ದ್ವಿಚಕ್ರ, ಆಟೊ, ಲಘು ವಾಹನ ಸೇರಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಖಾಸಗಿ ಬಸ್‌ ನಿಲ್ದಾಣ ಕೂಡ ಹತ್ತಿರದಲ್ಲಿದೆ. ಹೀಗಾಗಿ ಬಸ್‌ ಸಂಚಾರವೂ ಹೆಚ್ಚು. ರಸ್ತೆ ಕಿರಿದಾಗಿದ್ದು, ಇಕ್ಕಟ್ಟಿನಲ್ಲಿಯೇ ಸಂಚರಿಸುವ ದುಸ್ಥಿತಿ ಎದುರಾಗಿದೆ ಎಂದು ದೂರುತ್ತಾರೆ ಸವಾರ ಮಂಜುನಾಥ್‌.

ಇನ್ನೂ ಹತ್ತಿರದಲ್ಲೇ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರ್ಗದಲ್ಲಿ ಸಂಚಾರಕ್ಕಾಗಿ ಕೆಳಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಅಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಮಾರುಕಟ್ಟೆಗೆ ಬರುತ್ತಿದ್ದ ಲಾರಿಗಳೆಲ್ಲವೂ ಮೆದೇಹಳ್ಳಿ ರಸ್ತೆಯಲ್ಲೇ ಸಂಚರಿಸುತ್ತಿವೆ. ಇತರ ವಾಹನಗಳು ಇದಕ್ಕೆ ಹೊರತಾಗಿಲ್ಲ. ಇದು ಸಂಚಾರ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಮುರುಳಿ.

ವಾಹನಗಳ ಸಂಚಾರ ಹೆಚ್ಚಿರುವ ಕಾರಣ ಮೆದೇಹಳ್ಳಿಯ ರೈಲ್ವೆ ಕೆಳಸೇತುವೆ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಎರಡು ಕಡೆ ದೊಡ್ಡದಾದ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಉಬ್ಬುಗಳ ನಿರ್ಮಾಣದ ಬಳಿಕ ಸಂಚಾರ ಕಿರಿಕಿರಿ ಕಡಿಮೆಯಾಗಿದೆ.

ಜಿಲ್ಲೆಯ ಬಹುತೇಕ ರೈಲ್ವೆ ಕೆಳಸೇತುವೆಗಳ ಮಾರ್ಗಗಳಲ್ಲಿ ಮಳೆ ಸುರಿದಾಗ ಸುಗಮವಾಗಿ ಸಂಚರಿಸಲು ಸಾಧ್ಯವಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಆದರೆ, ಈ ಮಾರ್ಗದಲ್ಲಿ ಅಂತಹ ಸಮಸ್ಯೆ ಇಲ್ಲ. ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಆಗದಿದ್ದರೂ ಹೆಚ್ಚು ನೀರು ನಿಲ್ಲದಂತೆ ವ್ಯವಸ್ಥಿತವಾಗಿಯೇ ನಿರ್ಮಿಸಲಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ಕೆಲಕಾಲ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯ. ಎಲ್ಲಾ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯದ ಮಾತು ನಾಗರಿಕ ವಲಯದಿಂದ ಕೇಳಿಬರುತ್ತಿದೆ.

ನೀರು ನಿಂತಲ್ಲಿ ರಸ್ತೆಗಳು ಹಾಳು

‘ಮೆದೇಹಳ್ಳಿ ಮಾರ್ಗದ ರೈಲ್ವೆ ಕೆಳಸೇತುವೆ ಹೊರತುಪಡಿಸಿ ನಗರ ಹಾಗೂ ತಾಲ್ಲೂಕಿನ ಇತರೆಡೆ ನಿರ್ಮಿಸಿರುವ ಕೆಳಸೇತುವೆಗಳಲ್ಲಿ ನೀರು ನಿಂತು ರಸ್ತೆಗಳು ಹಾಳಾಗಿವೆ. ಇದರಿಂದ ಸರ್ಕಾರ ಮತ್ತು ಸಾರ್ವಜನಿಕರ ಕೋಟಿಗಟ್ಟಲೇ ಹಣ ನೀರಿನೊಂದಿಗೆ ಪೋಲಾಗಿದೆ’ ಎಂಬುದು ಸಾರ್ವಜನಿಕರ ಆರೋಪ.

‘ಸೇತುವೆ ನಿರ್ಮಿಸುವಾಗಲೇ ಕೂಲಂಕಷವಾಗಿ ಆ ಸ್ಥಳ ಪರಿಶೀಲಿಸಿ, ವೈಜ್ಞಾನಿಕವಾಗಿ ನಿರ್ಮಿಸಿದರೆ ಯಾವ ಸಮಸ್ಯೆಯೂ ಉಂಟಾಗದು. ಇದರಿಂದ ಬಹುಕಾಲ ಉಳಿಯುತ್ತವೆ. ರಸ್ತೆಗಳಿಗೂ ಹಾನಿ ಉಂಟಾಗುವುದಿಲ್ಲ. ನೀರು ನಿಲ್ಲುವುದಿಲ್ಲ. ಸಂಚಾರಕ್ಕೂ ತೊಂದರೆಯಾಗದು’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರರಾದ ಮುರುಗೇಶ್‌, ರಮಾಕಾಂತ್.

***

ಮಳೆ ಸುರಿದಾಗ ಈ ಕೆಳಸೇತುವೆಯಲ್ಲಿ ನೀರು ಹೆಚ್ಚು ಸಂಗ್ರಹ ಆಗುವುದಿಲ್ಲ. ಆದರೆ, ರಸ್ತೆಯ ಅಲ್ಲಲ್ಲಿ ತಗ್ಗು–ಗುಂಡಿ ಬಿದ್ದಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು.

ಮಂಜುನಾಥ್, ದ್ವಿಚಕ್ರ ವಾಹನ ಸವಾರ

***

ಹೆಚ್ಚು ಮಳೆಯಾದಾಗ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಮಳೆ ನೀರಿನ ಜತೆ ಚರಂಡಿಯ ಕಲುಷಿತ ನೀರು ಮಿಶ್ರಣಗೊಂಡು ಹರಿಯುವುದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತದೆ. ಆದ್ದರಿಂದ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಮುರುಳಿ, ಸ್ಥಳೀಯ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.