ADVERTISEMENT

ಬಿರುಗಾಳಿ, ಮಳೆ: ಮನೆಗಳಿಗೆ ನೀರು, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 9:33 IST
Last Updated 23 ಏಪ್ರಿಲ್ 2020, 9:33 IST
ಹೊಸದುರ್ಗ ತಾಲ್ಲೂಕಿನ ದುಗ್ಗಾವರದಲ್ಲಿ ಬುಧವಾರ ಸುರಿದ ಬಿರುಸಿನ ಮಳೆಗೆ ಇಲ್ಲಿನ ನೀರಳ್ಳದಲ್ಲಿ ನೀರು ಹರಿಯುತ್ತಿರುವುದು
ಹೊಸದುರ್ಗ ತಾಲ್ಲೂಕಿನ ದುಗ್ಗಾವರದಲ್ಲಿ ಬುಧವಾರ ಸುರಿದ ಬಿರುಸಿನ ಮಳೆಗೆ ಇಲ್ಲಿನ ನೀರಳ್ಳದಲ್ಲಿ ನೀರು ಹರಿಯುತ್ತಿರುವುದು   

ಹೊಸದುರ್ಗ: ಬುಧವಾರ ಸಂಜೆ ಸುರಿದ ಬಿರುಗಾಳಿ, ಮಳೆಗೆ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿಯ ರೈತ ನಾಗಪ್ಪ ಅವರ ಮನೆಯ ಶೀಟು ಗಾಳಿಗೆ ಹಾರಿಹೋಗಿವೆ.

ಬಿರುಗಾಳಿಗೆ ಮನೆ ಚಾವಣಿಯ ಸಿಮೆಂಟ್‌ ಶೀಟಿನ ತುಂಡು, ಮರದ ಸಾಮಗ್ರಿ, ಕಬ್ಬಿಣದ ಆಂಗ್ಲರ್‌ ಕಳಚಿ ಬಿದ್ದಿದ್ದರಿಂದ ನಾಗಪ್ಪ ಅವರ ಮನೆಯೊಳಗಿದ್ದ ಅವರ ತಾಯಿ ವೃದ್ಧೆ ಈರಜ್ಜಿ, ನಾದಿನಿ ಯಶೋದಮ್ಮ ಅವರಿಗೆ ಗಾಯವಾಗಿದೆ. ಅವರಿಗೆ ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಮಳೆಗೆ ಮನೆಯೊಳಗಿದ್ದ 20 ಶೇಂಗಾ ಚೀಲ, 10 ರಾಗಿ ಚೀಲ ಸೇರಿ ಇನ್ನಿತರ ಧವಸದ ಚೀಲಗಳು, ಆಹಾರ ಸಾಮಗ್ರಿಗಳು ನೀರು ಪಾಲಾಗಿದೆ. ಇದರಿಂದ ನಾಗಪ್ಪ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಾಕಿಕೆರೆ ಗ್ರಾಮದ ನಾಗರಾಜು, ಮಹಂತೇಶ್‌ ಅವರ ಮನೆಯ ಶೀಟು ಗಾಳಿಗೆ ಹಾರಿ ಹೋಗಿದೆ. ಮನೆಯ ಮೇಲ್ಚಾವಣಿಗೆ ಬಳಿದ್ದ ಕಬ್ಬಿಣದ ಆಂಗ್ಲರ್‌ ಸಹ ಬಿರುಗಾಳಿಗೆ ಹಾರಿದ್ದರಿಂದ ನಾಲ್ಕೈದು ಮನೆಯ ಹೆಂಚುಗಳು ಹಾಳಾಗಿವೆ.

ADVERTISEMENT

ಗ್ರಾಮದ ವಿದ್ಯುತ್‌ ಸಂಪರ್ಕದ ಲೈನ್‌ ತುಂಡಾಗಿ ಬಿದ್ದಿತ್ತು. ವಿದ್ಯುತ್ ಕಂಬವೂ ಮುರಿದು ಬೀಳುವಂತಾಗಿತ್ತು. ವಿದ್ಯುತ್‌ ಕಡಿತವಾಗಿದ್ದರಿಂದ ಯಾವುದೇ ಅವಘಡ ಸಂಭವಿಸಲಿಲ್ಲ. ಬಿರುಗಾಳಿಗೆ ಹಲವು ರೈತರ ಬಾಳೆ, ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿವೆ. ಎಲೆಬಳ್ಳಿಗೂ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 5 ತಾಸಿಗೂ ಹೆಚ್ಚು ಹೊತ್ತು ವಿದ್ಯುತ್‌ ಸ್ಥಗಿತಗೊಂಡಿತ್ತು.

ಹದ ಮಳೆ: ದುಗ್ಗಾವರ, ಗೂಳಿಹಟ್ಟಿ, ದೊಡ್ಡಘಟ್ಟ, ನಾಕಿಕೆರೆ, ಕೆಂಕೆರೆ, ದೊಡ್ಡಕಿಟ್ಟದಹಳ್ಳಿ, ಜಾನಕಲ್‌, ದೊಡ್ಡಘಟ್ಟ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಅರ್ಧ ತಾಸಿಗೂ ಹೆಚ್ಚು ಹೊತ್ತು ಆಲಿಕಲ್ಲು ಮಳೆ ಸುರಿಯಿತು. ಇದರಿಂದಾಗಿ ಬೇಸಿಗೆ ಬಿರುಬಿಸಿಲಿಗೆ ಕಾದಿದ್ದ ಇಳೆ ತಂಪಾಯಿತು. ಜಮೀನು ಹದವಾಗಿದ್ದು ರೈತರು ಮಾಗಿ ಉಳುಮೆ ಮಾಡಲು ನೆರವಾಗಿದ್ದು, ಪೂರ್ವ ಮುಂಗಾರು ಹಂಗಾಮಿನ ಎಳ್ಳು, ಹೆಸರು ಬಿತ್ತನೆಗೆ ಸಹಕಾರಿಯಾಗಿದೆ.

ಭರ್ತಿಯಾದ ಚೆಕ್‌ಡ್ಯಾಂ:ದುಗ್ಗಾವರ ಸಮೀಪದಲ್ಲಿ ಈಚೆಗಷ್ಟೇ ಕಾಮಗಾರಿ ಮುಕ್ತಾಯವಾಗಿದ್ದ ಚೆಕ್‌ಡ್ಯಾಂ ಬಿರುಸಿನ ಮಳೆಗೆ ಭರ್ತಿಯಾಗಿದೆ. ಇದರಿಂದ ಈ ಭಾಗದ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ಜೀವಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲ್ಲಾಪುರ, ಕಂಠಾಪುರ, ಮಾವಿನಕಟ್ಟೆ, ಬೀಸನಹಳ್ಳಿ, ಹೆಬ್ಬಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.