ADVERTISEMENT

ಹೊಸದುರ್ಗದಲ್ಲಿ ದಿನವಿಡೀ ಮಳೆ: ಹೆಸರುಕಾಳು ಸುಗ್ಗಿಗೆ ಅಡ್ಡಿ

ಒಂದೂವರೆ ತಿಂಗಳ ಕಾಲ ಮಳೆ ಕೈಕೊಟ್ಟಿದ್ದರಿಂದ ಶೇ 50 ಇಳುವರಿ ಕುಸಿತ

ಎಸ್.ಸುರೇಶ್ ನೀರಗುಂದ
Published 23 ಜುಲೈ 2021, 2:57 IST
Last Updated 23 ಜುಲೈ 2021, 2:57 IST
ಹೊಸದುರ್ಗ ತಾಲ್ಲೂಕಿನ ತಾರೀಕೆರೆ ಗ್ರಾಮದಲ್ಲಿ ಹೆಸರುಕಾಳು ಬೆಳೆ ಸುಗ್ಗಿ ಕಾರ್ಯ ಮಾಡುತ್ತಿರುವುದು. ಸೋನೆ ಮಳೆಯಿಂದ ಹೆಸರುಕಾಳು ಕಪ್ಪಾಗಿರುವುದರಿಂದ ತಲೆಮೇಲೆ ಕೈಹೊತ್ತು ಕುಳಿತಿರುವ ರೈತ ಮಹಿಳೆ.
ಹೊಸದುರ್ಗ ತಾಲ್ಲೂಕಿನ ತಾರೀಕೆರೆ ಗ್ರಾಮದಲ್ಲಿ ಹೆಸರುಕಾಳು ಬೆಳೆ ಸುಗ್ಗಿ ಕಾರ್ಯ ಮಾಡುತ್ತಿರುವುದು. ಸೋನೆ ಮಳೆಯಿಂದ ಹೆಸರುಕಾಳು ಕಪ್ಪಾಗಿರುವುದರಿಂದ ತಲೆಮೇಲೆ ಕೈಹೊತ್ತು ಕುಳಿತಿರುವ ರೈತ ಮಹಿಳೆ.   

ಹೊಸದುರ್ಗ: ತಾಲ್ಲೂಕಿನ ಹಲವೆಡೆ ಗುರುವಾರ ದಿನವಿಡೀ ಮಳೆಯಾಗಿದ್ದರಿಂದ ಹೆಸರುಕಾಳು ಸುಗ್ಗಿ ಕಾರ್ಯಕ್ಕೆ ಅಡ್ಡಿಯಾಗಿದ್ದು, ರೈತರಿಗೆ ಸಂಕಟವನ್ನುಂಟು ಮಾಡಿದೆ.

ಏಪ್ರಿಲ್‌ ಹಾಗೂ ಮೇ ಮೊದಲನೇ ವಾರದಲ್ಲಿ ತಾಲ್ಲೂಕಿನ ಹಲವೆಡೆ ಹದ ಮಳೆಯಾಯಿತು. ಇದರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ರೈತರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಿದ್ದರು.

ಕೋವಿಡ್‌ ಸಂಕಷ್ಟದ ನಡುವೆಯೂ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಬೆಳೆಯ ಉಪಚಾರ ಚೆನ್ನಾಗಿ ಮಾಡಿದ್ದರಿಂದ ಹಲವೆಡೆ ಬೆಳೆ ಹುಲುಸಾಗಿ ಬಂದಿತ್ತು. ಆದರೆ, ಹೆಸರುಕಾಳು ಬೆಳೆ ಹೂವು, ಹೀಚು ಆಗುವ ಹಂತದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ಮಳೆ ಕೈಕೊಟ್ಟಿದ್ದರಿಂದ ಕೆಲವೆಡೆ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಳುವರಿ ಕುಸಿತವಾಯಿತು.

ADVERTISEMENT

ಈಗ ಕಟಾವಿಗೆ ಬಂದಿರುವ ಹೆಸರುಕಾಳು ಗಿಡವನ್ನು ಕಿತ್ತು ಸುಗ್ಗಿ ಕಾರ್ಯಕ್ಕೆ ಕೆಲವೆಡೆ ರಸ್ತೆ, ಕಣಗಳಿಗೆ ಹಾಕಿದ್ದಾರೆ. ಆದರೆ, ಒಂದು ವಾರದಿಂದ ಆಗಾಗ ಸೋನೆ ಮಳೆ ಬರುತ್ತಿರುವುದರಿಂದ ಹೆಸರುಕಾಳು ಸುಗ್ಗಿ ಕಾರ್ಯದಲ್ಲಿ ನಿರತರಾಗಿರುವ ರೈತರಿಗೆ ತೀವ್ರ ತೊಂದರೆಯಾಗಿದೆ. ಇದರಿಂದಾಗಿ ಮಳೆ ನೀರಿಗೆ ನೆಂದು ಹೆಸರುಕಾಳು ಕಪ್ಪಾಗುತ್ತಿದೆ. ಇದರಿಂದಾಗಿ ಸುಗ್ಗಿ ಕಾರ್ಯದಲ್ಲಿ ತೊಡಗಿರುವ ರೈತ ಮಹಿಳೆಯರು ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂಬ ಬೇಸರದಿಂದ ಸುಗ್ಗಿ ಕಣದಲ್ಲಿಯೇ ತಲೆ ಮೇಲೆ ಕೈಹೊತ್ತು
ಕುಳಿತಿದ್ದಾರೆ.

ಮಳೆ ಬಿಡುವು ಕೊಟ್ಟ ನಂತರ ಬೆಳೆ ಕಟಾವು ಮಾಡೋಣ ಎಂದು ಕೆಲವು ರೈತರು ಜಮೀನಿನಲ್ಲಿಯೇ ಹೆಸರುಕಾಳು ಗಿಡ ಬಿಟ್ಟಿದ್ದರು. ಆದರೆ, ಏಳೆಂಟು ದಿನಗಳಿಂದ ಗಿಡ ಕೀಳಲು ಮಳೆ ಬಿಡದಿರುವುದರಿಂದ ಗಿಡದಲ್ಲಿಯೇ ಬಿಟ್ಟಿದ್ದಾರೆ. ಗಿಡ ಕಿತ್ತಿರುವ ಕೆಲವರು ತಾಡಪಾಲು ಮುಚ್ಚಿದ್ದಾರೆ. ಇದರಿಂದಾಗಿ ಹೆಸರುಕಾಳು ಮೊಳಕೆಯೊಡೆಯುತ್ತಿದೆ. ಒಮ್ಮೆ ಮಳೆ ಅಭಾವದಿಂದ ಬೆಳೆಯ ಇಳುವರಿ ಕುಸಿತವಾಯಿತು. ಈಗ ಇರುವ ಅಲ್ಪಸ್ವಲ್ಪ ಬೆಳೆಯ ಸುಗ್ಗಿಕಾರ್ಯಕ್ಕೂ ಸೋನೆ ಮಳೆಯಿಂದ ತೊಂದರೆಯಾಗುತ್ತಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರಾದ ರಾಜಪ್ಪ, ಬಸವರಾಜಪ್ಪ, ಗೋವಿಂದಪ್ಪ ತಮ್ಮ ಅಳಲು
ತೋಡಿಕೊಂಡರು.

ಕಳೆದ ಸೋಮವಾರ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಹೆಸರುಕಾಳು ಧಾರಣೆ ₹ 5,000ರಿಂದ ₹ 7,200ರವರೆಗೂ ಇತ್ತು. ರೈತರು ಹೆಚ್ಚು ಹೆಸರುಕಾಳು ಬೆಳೆಯದಿರುವಾಗ ಬೆಲೆ ಉತ್ತಮವಾಗಿರುತ್ತದೆ. ನಮ್ಮ ಬಳಿ ಹೆಚ್ಚು ದವಸ ಇರುವಾಗ ದರ ಪಾತಾಳಕ್ಕಿಳಿಯುವುದು ದುರದೃಷ್ಟಕರ ಸಂಗತಿ. ಕೋವಿಡ್‌ ಸಂಕಷ್ಟ ಕಾಲದಲ್ಲಿಯೂ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ದರ ಏರಿಕೆ ಮಾಡಿರುವ ಸರ್ಕಾರ ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿಲ್ಲ.

ಕೃಷಿ ಸಂಬಂಧಿತ ಇಲಾಖೆಗಳಿಗೆ ಹಿಂದೆ ನೀಡುತ್ತಿದ್ದ ಅನುದಾನವನ್ನು ಕೋವಿಡ್‌ ನೆಪ ಹೇಳಿಕೊಂಡು ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಿರುವುದು ದುರಂತದ ಸಂಗತಿ ಎಂದು ತಾಲ್ಲೂಕಿನ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

* ಪ್ರತಿವರ್ಷ 10 ಎಕರೆಗೆ ಹೆಸರುಕಾಳು ಬಿತ್ತನೆ ಮಾಡಿ ಸುಮಾರು 50 ಕ್ವಿಂಟಲ್‌ ಬೆಳೆಯುತ್ತಿದ್ದೆ. ಈ ಬಾರಿ ಬೆಳೆಯ ಸುಗ್ಗಿಕಾರ್ಯಕ್ಕೆ ಸೋನೆ ಮಳೆ ಬಿಡದಿರುವುದು ಬೇಸರವನ್ನುಂಟು ಮಾಡಿದೆ.

-ರಾಜಪ್ಪ, ರೈತ, ತಾರೀಕೆರೆ

* ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ಕಟಾವು ಆಗುವವರೆಗೂ ಬೆಳೆವಿಮೆ ಪಾವತಿಗೆ ಅವಕಾಶ ಕೊಡಬೇಕು. ಕಟಾವಿಗೂ ಮುನ್ನವೇ ವಿಮೆ ಪಾವತಿ ದಿನಾಂಕ ಕೊನೆಗೊಳಿಸಿದರೆ ರೈತರಿಗೆ ಅನ್ಯಾಯವಾಗುತ್ತದೆ.

-ತಾರೀಕೆರೆ ಕರಿಸಿದ್ದಯ್ಯ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.