ADVERTISEMENT

ಚಿತ್ರದುರ್ಗದ ಐತಿಹಾಸಿಕ ರಾಜಬೀದಿ ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ನಗರದ ದೊಡ್ಡಪೇಟೆಯಲ್ಲಿ ಸ್ಥಳ ಪರಿಶೀಲನೆ ವೇಳೆ ಶಾಸಕ ತಿಪ್ಪಾರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 2:30 IST
Last Updated 21 ನವೆಂಬರ್ 2020, 2:30 IST
ಚಿತ್ರದುರ್ಗದ ರಾಜಬೀದಿ ದೊಡ್ಡಪೇಟೆ ರಸ್ತೆ ಮಾರ್ಗ ವಿಸ್ತರಣೆ ಸಂಬಂಧ ಶುಕ್ರವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಥಳ ಪರಿಶೀಲನೆ ನಡೆಸಿದರು
ಚಿತ್ರದುರ್ಗದ ರಾಜಬೀದಿ ದೊಡ್ಡಪೇಟೆ ರಸ್ತೆ ಮಾರ್ಗ ವಿಸ್ತರಣೆ ಸಂಬಂಧ ಶುಕ್ರವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಥಳ ಪರಿಶೀಲನೆ ನಡೆಸಿದರು   

ಚಿತ್ರದುರ್ಗ: ಇಲ್ಲಿನ ಐತಿಹಾಸಿಕ ರಾಜಬೀದಿ ಮಾರ್ಗ ವಿಸ್ತರಣೆ ಸಂಬಂಧ ₹ 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿಸಿ, ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ರಾಜಬೀದಿ ದೊಡ್ಡಪೇಟೆಯಲ್ಲಿ ಶುಕ್ರವಾರ ಸ್ಥಳೀಯರೊಂದಿಗೆ ಮಾರ್ಗ ಪರಿಶೀಲನೆ ನಡೆಸಿದ ಶಾಸಕರು, ಜನರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

‘ಇದು ಕೋಟೆಗೆ ತೆರಳುವ ಮುಖ್ಯ ರಸ್ತೆ ಮಾರ್ಗವಾಗಿದೆ. ಆದರೆ, ಈ ಹಿಂದೆ 60 ಅಡಿ ಇದ್ದ ರಸ್ತೆ ಮಾರ್ಗವೀಗ 45 ಅಡಿಯಾಗಿದೆ. ತುಂಬಾ ಹಳೆಯ ರಸ್ತೆಯಾದ್ದರಿಂದ ಬಹಳಷ್ಟು ಕಡೆ ಒತ್ತುವರಿಯಾಗಿದೆ. ಇದರಿಂದಾಗಿ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅನೇಕರು ಮನೆಯ ಮುಂದೆ ನೀರಿನ ತೊಟ್ಟಿ, ಮೆಟ್ಟಿಲು ನಿರ್ಮಿಸಿಕೊಂಡಿದ್ದಾರೆ. ಬಹುಶಃ ಇವೆಲ್ಲವೂ ತೆರವಾಗಲಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಜನತೆ ಮುಂದಾಗಬೇಕಿದೆ. ಯುಜಿಡಿ ಅಗತ್ಯವಿದ್ದಲ್ಲಿ ನಗರಸಭೆ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು. ನಳ ಸಂಪರ್ಕವನ್ನು ಮನೆ ಮಾಲೀಕರೇ ಮಾಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ನಗರದ ಎಲ್ಲ ರಸ್ತೆಗಳನ್ನು ಸಿ.ಸಿ.ರಸ್ತೆಯಾಗಿಸುವ ಗುರಿ ಹೊಂದಲಾಗಿದೆ. ಉಚ್ಚಂಗಿಯಲ್ಲಮ್ಮ ದೇಗುಲ ಮುಂಭಾಗದಿಂದ ಜಿಲ್ಲಾ ಆಸ್ಪತ್ರೆ ಹಾಗೂ ಮದಕರಿನಾಯಕ ಪ್ರತಿಮೆವರೆಗೂ ರಸ್ತೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯರಾದ ವೆಂಕಟೇಶ್, ಹರೀಶ್, ಚಂದ್ರಶೇಖರ್, ಮಾಜಿ ಸದಸ್ಯರಾದ ಸಿ.ಟಿ.ಕೃಷ್ಣಮೂರ್ತಿ, ವೆಂಕಟೇಶ್, ಪೌರಾಯುಕ್ತ ಹನುಮಂತರಾಜು, ಮುಖಂಡರಾದ ರಾಘವೇಂದ್ರ, ಶ್ರೀಶೈಲಾ ಆರಾಧ್ಯ, ಜಗದೀಶ್, ಮೋಹನ್, ನಾಗರಾಜ್ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.