ADVERTISEMENT

ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:59 IST
Last Updated 25 ಜನವರಿ 2026, 7:59 IST
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಗ್ರಾಮ ದೇವತೆ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಬಲಿಷ್ಠ ಟಗರುಗಳ ಮಧ್ಯೆ ಕಾಳಗ ನಡೆಸಲಾಯಿತು.
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಗ್ರಾಮ ದೇವತೆ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಬಲಿಷ್ಠ ಟಗರುಗಳ ಮಧ್ಯೆ ಕಾಳಗ ನಡೆಸಲಾಯಿತು.   

ಚಿಕ್ಕಜಾಜೂರು: ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಟಗರು ಕಾಳಗದಲ್ಲಿ ಹೊಳಲ್ಕೆರೆಯ 8 ಹಲ್ಲಿನ ಮಾರ್ಕೋ ಟಗರು ಪ್ರಥಮ ಸ್ಥಾನ ಪಡೆಯಿತು.

ಚಿಕ್ಕಜಾಜೂರು ಸಮೀಪದ ದಾಸಿಕಟ್ಟೆ ಗ್ರಾಮದಲ್ಲಿ ಜ. 27 ಹಾಗೂ 28ರಂದು ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಗುರುವಾರ ರಾತ್ರಿ ರಾಜ್ಯ ಮಟ್ಟದ ಟಗರು ಕಾಳಗವನ್ನು ಗ್ರಾಮಸ್ಥರು ಏರ್ಪಡಿಸಿದ್ದರು. ಸಂಜೆ ಆರಂಭವಾದ ಟಗರು ಕಾಳಗದಲ್ಲಿ ನಾಲ್ಕು ಹಲ್ಲು, ಆರು ಹಲ್ಲು ಹಾಗೂ ಎಂಟು ಹಲ್ಲುಗಳುಳ್ಳ ಟಗರುಗಳ ಕಾಳಗಕ್ಕೆ ಗ್ರಾಮದ ಮುಖಂಡರು ಚಾಲನೆ ನೀಡಿದರು.

ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಟಗರಿನ ಮಲೀಕರು ಬಂದು ಟಗರುಗಳ ಶಕ್ತಿ ಪ್ರದರ್ಶನಕ್ಕೆ ಅಣಿಗೊಳಿಸಿದರು. ಕಾಳಗ ನೋಡಲು ತಾಲ್ಲೂಕಿನ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಜಮಾಯಿಸಿದ್ದರು. 

ADVERTISEMENT

ನಾಲ್ಕು ಹಲ್ಲಿನ ಕುರಿ ಕಾಳಗದಲ್ಲಿ ಶಿವಪುರದ ಬೆಳ್ಳಿ ಪ್ರಥಮ ಸ್ಥಾನ ಪಡೆದು, ಬಹುಮಾನವಾಗಿ ₹ 20,000 ಪಡೆದರೆ, ದ್ವಿತೀಯ ಬಹುಮಾನ ₹ 10,000ವನ್ನು ತುಪ್ಪದಹಳ್ಳಿಯ ಭೂತ ಟಗರು ಪಡೆಯಿತು. ತೃತೀಯ ಬಹುಮಾನವಾಗಿ ₹ 5,000ವನ್ನು ಶಿವಮೊಗ್ಗ ತಾಲ್ಲೂಕಿನ ಮಾವಿನಕಟ್ಟೆಯ ಕರಿಯ ಟಗರು ಪಡೆಯಿತು.

ಆರು ಹಲ್ಲಿನ ಕುರಿ ಕಾಳಗದಲ್ಲಿ ಚನ್ನಗಿರಿ ತಾಲ್ಲೂಕಿನ ಮಲಹಾಳ್‌ ಟಗರು ಪ್ರಥಮ ಬಹುಮಾನವಾಗಿ ₹ 25,000 ಪಡೆದರೆ, ದ್ವಿತೀಯ ಬಹುಮಾನ ₹ 12,500ವನ್ನು ಚಳ್ಳಕೆರೆ ಟಗರು ಪಡೆಯಿತು. ತೃತೀಯ ಬಹುಮಾನವಾಗಿ ₹ 6,000ವನ್ನು ಚಿತ್ರದುರ್ಗ ತಾಲ್ಲೂಕಿನ ಮೊನಕನಹಳ್ಳಿಯ ಗುಂಡ ಪಡೆಯಿತು.

ಎಂಟು ಹಲ್ಲಿನ ಕುರಿ ಕಾಳಗದಲ್ಲಿ ಹೊಳಲ್ಕೆರೆಯ ಮಾರ್ಕೋ ಪ್ರಥಮ ಬಹುಮಾನವಾಗಿ ₹ 40,000 ಪಡೆದರೆ, ದ್ವಿತೀಯ ಬಹುಮಾನ ₹ 20,000ವನ್ನು ಚಳ್ಳಕೆರೆ ನಗರದ ಮುತ್ತ ಟಗರು ಪಡೆಯಿತು. ತೃತೀಯ ಬಹುಮಾನವಾಗಿ ₹ 10,000ವನ್ನು ಚಳ್ಳಕೆರೆ ನಗರದ ಗಾದ್ರಿ ಟಗರು ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.